

ಹೈದರಾಬಾದ್: ಮಹಾಮಾರಿ ಕರೊನಾ ವೈರಸ್ ಹಿನ್ನೆಲೆಯಲ್ಲಿ ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಹಾಗೂ ಜೂ. ಎನ್ಟಿಆರ್ ಮತ್ತು ರಾಮ್ಚರಣ್ ನಟನೆಯ ಬಹುನಿರೀಕ್ಷಿತ “ಆರ್ಆರ್ಆರ್” ಸಿನಿಮಾ ಮತ್ತೊಮ್ಮೆ ಮುಂದಕ್ಕೆ ಹೋಗಿದೆ.
ಜನವರಿ 7ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ದೇಶದಲ್ಲಿ ಕರೊನಾ ರೂಪಾಂತರಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಹಲವೆಡೆ ಈಗಾಗಲೇ ಶಾಲಾ-ಕಾಲೇಜು ಹಾಗೂ ಥಿಯೇಟರ್ಗಳು ಬಂದ್ ಆಗಿವೆ. ಹೀಗಾಗಿ ಆರ್ಆರ್ಆರ್ ಚಿತ್ರವನ್ನು ಮುಂದೂಡಲಾಗಿದೆ. ಬಹಳ ಕಾತರದಿಂದ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ.
ರಾಜಮೌಳಿ ನಿರ್ದೇಶನದ ಸಿನಿಮಾ ಅಂದರೆ ತುಂಬಾ ನಿರೀಕ್ಷೆ ಇರುತ್ತದೆ. ಅದಲ್ಲದೆ, ಆರ್ಆರ್ಆರ್ ಮೇಲೆ ಇನ್ನೂ ಹೆಚ್ಚಿನ ನಿರೀಕ್ಷೆಯಿದೆ. ಅದಕ್ಕೆ ಕಾರಣ ಮೊದಲ ಬಾರಿಗೆ ರಾಮ್ಚರಣ್ ಮತ್ತು ಜೂ. ಎನ್ಟಿಆರ್ ತೆರೆಹಂಚಿಕೊಂಡಿದ್ದಾರೆ. ಈಗಾಗಲೇ ಚಿತ್ರತಂಡ ಭರ್ಜರಿ ಪ್ರಚಾರ ಕೂಡ ನಡೆಸಿತ್ತು. ಅಷ್ಟರಲ್ಲಾಗಲೇ ಚಿತ್ರವನ್ನು ಮೂಂದೂಡಿರುವುದು ಕಾದ ಬೆಂಕಿಗೆ ನೀರು ಸುರಿದಂತಾಗಿದೆ. ಒಂದು ಬಾರಿಯಾಗಿದ್ದರೆ ಓಕೆ, ಆದರೆ, ನಾಲ್ಕನೇ ಬಾರಿ ಆರ್ಆರ್ಆರ್ ಮುಂದಕ್ಕೆ ಹೋಗಿದ್ದು, ಇದು ಟಾಲಿವುಡ್ ಮಟ್ಟದಲ್ಲಿ ಅಂತ್ಯಂತ ಕಳಪೆ ಸಾಧನೆ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ. ಮತ್ತೊಂದೆಡೆ ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿಮಾನಿಗಳು ಚಿತ್ರಕ್ಕೆ ಯಾವುದೇ ಬಲವಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಆರ್ಆರ್ಆರ್ ಚಿತ್ರದ ಶೂಟಿಂಗ್ 2018 ರಲ್ಲಿ ಪ್ರಾರಂಭವಾಯಿತು. ಕರೊನಾ ಮೊದಲ ಅಲೆ ಮತ್ತು ಎರಡನೇ ಅಲೆಯಿಂದ ವಿಳಂಬವಾದರೂ, ಶೂಟಿಂಗ್ ವೆಚ್ಚದಲ್ಲಿ ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಜಕ್ಕಣ್ಣ ಆರ್ಆರ್ಆರ್ ಚಿತ್ರವನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ಆರಂಭದಲ್ಲಿ ಚಿತ್ರವು ಜುಲೈ 30, 2020 ರಂದು ಬಿಡುಗಡೆ ಆಗುತ್ತದೆ ಎಂದು ಘೋಷಿಸಲಾಗಿತ್ತು. ನಂತರ ಚಲನಚಿತ್ರವನ್ನು ಜನವರಿ 8, 2021 ಕ್ಕೆ ಮುಂದೂಡಲಾಯಿತು. ನಂತರ ಅಕ್ಟೋಬರ್ 13ಕ್ಕೆ ನಿಗದಿ ಮಾಡಲಾಗಿತ್ತು. ಅದು ಸೂಕ್ತವಲ್ಲ ಅಂದುಕೊಂಡು ಕೊನೆಯದಾಗಿ 2022ರ ಜನವರಿ 7ಕ್ಕೆ ಮುಂದೂಡಲಾಗಿತ್ತು. ಇದೀಗ ಆ ದಿನಾಂಕವನ್ನು ಮುಂದೂಡಲಾಗಿದೆ. ಇದರಿಂದ ಅಭಿಮಾನಿಗಳು ಜಕ್ಕಣನ ಮೇಲೆ ಅಸಮಾಧಾನಗೊಂಡಿದ್ದಾರೆ. ಚಿತ್ರ ಏಪ್ರಿಲ್ನಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. (ಏಜೆನ್ಸೀಸ್)