

ಹೈದರಾಬಾದ್: ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಹಾಗೂ ಜೂ. ಎನ್ಟಿಆರ್ ಮತ್ತು ರಾಮ್ಚರಣ್ ನಟನೆಯ ಬಹುನಿರೀಕ್ಷಿತ "ಆರ್ಆರ್ಆರ್" ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಜನವರಿ 7ರಂದು ಚಿತ್ರ ಬಿಡುಗಡೆಯಾಗಲಿದ್ದು, ಜೂ. ಎನ್ಟಿಆರ್ ಹಾಗೂ ರಾಮ್ಚರಣ್ ಅಭಿಮಾನಿಗಳು ಬಹಳ ಕಾತರದಿಂದ ಎದುರು ನೋಡುತ್ತಿದ್ದಾರೆ. ಆದರೆ, ಸಿನಿಮಾ ಬಿಡುಗಡೆಗೂ ಮುನ್ನವೇ ಕೇಳಿಬಂದಿರುವ ವಿಮರ್ಶೆವೊಂದು ಸತ್ಯವಾದರೆ, ಆರ್ಆರ್ಆರ್ ಚಿತ್ರವನ್ನು ಭಾರೀ ವಿವಾದಕ್ಕೆ ದೂಡುವ ಸಾಧ್ಯತೆ ಇದೆ.
ನಮಗೆಲ್ಲರಿಗೂ ತಿಳಿದಿರುವ ಹಾಗೇ "ಆರ್ಆರ್ಆರ್" ಮಲ್ಟಿಸ್ಟಾರರ್ ಸಿನಿಮಾ. ಜೂ. ಎನ್ಟಿಆರ್, ರಾಮ್ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಶ್ರೇಯಾ ಶರಣ್ ಸೇರಿದಂತೆ ಬಹುದೊಡ್ಡ ತಾರಾಬಳಗವೇ ಇದೆ. ಇದೇ ಮೊದಲ ಬಾರಿಗೆ ಜೂ. ಎನ್ಟಿಆರ್ ಮತ್ತು ರಾಮ್ಚರಣ್ ಒಟ್ಟಿಗೆ ತೆರೆಹಂಚಿಕೊಂಡಿದ್ದಾರೆ. ಇಬ್ಬರು ಕೂಡ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರು. ಇಬ್ಬರಿಗೂ ಪ್ರತ್ಯೇಕವಾಗಿ ಬಹುದೊಡ್ಡ ಅಭಿಮಾನಿ ಬಳಗವೇ ಇದೆ. ಆದರೆ, ಇದೀಗ ಆರ್ಆರ್ಆರ್ ಸಿನಿಮಾ ಬಗ್ಗೆ ಕೇಳಿಬಂದಿರುವ ವಿಮರ್ಶೆವೊಂದು ರಾಮ್ಚರಣ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಉಮೇರ್ ಸಂಧು ಎಂಬ ಹೆಸರು ಸಿನಿ ಮಂದಿಗೆ ಚಿರಪರಿಚಿತ. ಯುಎಇ ಸೆನ್ಸಾರ್ ಬೋರ್ಡ್ನ ಸದಸ್ಯ ಎಂದು ತಮ್ಮನ್ನು ತಾವು ಕರೆದುಕೊಂಡಿರುವ ಉಮರ್ ಸಂದು ಆರ್ಆರ್ಆರ್ ಸಿನಿಮಾ ಬಗ್ಗೆ ಒಂದು ಪದದ ವಿಮರ್ಶೆ ನೀಡಿದ್ದಾರೆ. ಸೆನ್ಸಾರ್ ಹಿನ್ನೆಲೆಯಲ್ಲಿ ಈಗಾಗಲೇ ಉಮೇರ್ ಸಂಧು ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ಉಮರ್ ಸಂಧು, ಸೆನ್ಸಾರ್ ಬೋರ್ಡ್ನಲ್ಲಿ ಆರ್ಆರ್ಆರ್ ಸಿನಿಮಾ ನೋಡಿದೆ. ಇಡೀ ಚಿತ್ರ ಜೂ. ಎನ್ಟಿಆರ್ಗೆ ಸಂಬಂಧಿಸಿದ್ದು, ಅವರೇ ಈ ಚಿತ್ರದ ಆತ್ಮ ಎಂದಿದ್ದಾರೆ.
ಇದೇ ಟ್ವೀಟ್ ಇದೀಗ ರಾಮ್ಚರಣ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ, ಉಮೇರ್ ಸಂಧು ವಿರುದ್ಧ ಅಭಿಮಾನಿಗಳು ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಟ್ವೀಟ್ ಮಾಡಿ ಫ್ಯಾನ್ಸ್ ವಾರ್ ಶುರು ಮಾಡಬೇಡಿ ಎಂದಿದ್ದಾರೆ. ನಿಮ್ಮದು ಅತ್ಯಂತ ಕೆಟ್ಟ ವಿಮರ್ಶೆ ಎಂದು ಜರಿದಿದ್ದಾರೆ. ಇನ್ನು ಕೆಲವರು ಉಮೇರ್ ಸಂಧು ಹೇಳಿದ್ದು ನಿಜವಾದರೆ, ಅಭಿಮಾನಿಗಳ ಕಿತ್ತಾಟಕ್ಕೆ ಆರ್ಆರ್ಆರ್ ಚಿತ್ರ ಕಾರಣವಾಗಲಿದೆ ಎಂದಿದ್ದಾರೆ. ಆದರೆ, ರಾಜಮೌಳಿ ಇಬ್ಬರ ಪಾತ್ರಕ್ಕೂ ನ್ಯಾಯ ಒದಗಿಸಿರುತ್ತಾರೆ ಎಂದು ಕೆಲವು ನಂಬಿದ್ದಾರೆ. ಏನೇ ಇರಲಿ ಜನವರಿ 7ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ನಂತರ ಅಭಿಮಾನಿಗಳ ಅಭಿಪ್ರಾಯ ಯಾವ ರೀತಿಯಲ್ಲಿರಲಿದೆ ಎಂಬ ಕುತೂಹಲ ಇದೀಗ ಮನೆ ಮಾಡಿದೆ. (ಏಜೆನ್ಸೀಸ್)