

ಚೆನ್ನೈ: ಕಾಲಿವುಡ್ ಸ್ಟಾರ್ ನಟ ಹಾಗೂ ನಿರ್ದೇಶಕ ರಾಘವ ಲಾರೆನ್ಸ್ ಅವರು ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರ ಜೊತೆಗೆ ರಾಘವ ಲಾರೆನ್ಸ್ ಅವರು ರಜಿನಿಕಾಂತ್ ಅವರನ್ನು ಭೇಟಿ ಮಾಡಿದ್ದೇಕೆ? ಮತ್ತು ಆಶೀರ್ವಾದ ಪಡೆದುಕೊಂಡಿದ್ದೇಕೆ? ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದು, ಅದಕ್ಕೆ ಉತ್ತರ ಇಲ್ಲಿದೆ.
ನಿಮಗೆ ಡಾ. ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಆಪ್ತಮಿತ್ರ ನೆನೆಪಿದೆಯಾ? ಯಾರಿಗೆ ತಾನೇ ನೆನಪಿಲ್ಲ. ವಿಷ್ಣು ಸಿನಿಮಾ ಕೆರಿಯರ್ನ ಅದ್ಭುತ ಸಿನಿಮಾಗಳಲ್ಲಿ ಇದು ಒಂದು. ಇದು ಮಲಯಾಳಂ ಸಿನಿಮಾದ ರಿಮೇಕ್. ಕನ್ನಡದ ಬಳಿಕ ತಮಿಳಿನಲ್ಲೂ ಈ ಸಿನಿಮಾ ರಿಮೇಕ್ ಆಯಿತು. ಅಲ್ಲಿ ಸೂಪರ್ಸ್ಟಾರ್ ರಜಿನಿಕಾಂತ್ ಅವರು ಮುಖ್ಯಪಾತ್ರದಲ್ಲಿ ನಟಿಸಿದರು. ಚಿತ್ರದ ಹೆಸರು ಚಂದ್ರಮುಖಿ. ಅಲ್ಲೂ ಕೂಡ ಸಿನಿಮಾ ಸೂಪರ್ ಹಿಟ್ ಆಯಿತು.
ಇದೊಂದು ಸೈಕಾಲಾಜಿಕಲ್ ಹಾರರ್ ಸಿನಿಮಾ. ಇದೀಗ ಈ ಸಿನಿಮಾದ ಮುಂದುವರಿದ ಭಾಗ ಅಂದರೆ ಚಂದ್ರಮುಖಿ 2 ತೆರೆಗೆ ಬರಲಿದೆ. ಈ ಸಿನಿಮಾವನ್ನು ಪಿ.ವಾಸು ಅವರು ನಿರ್ದೇಶನ ಮಾಡಲಿದ್ದಾರೆ. ಒಂದು ತಿಂಗಳ ಹಿಂದೆಯೇ ಲೈಕಾ ಪ್ರೊಡಕ್ಸನ್ ಕಂಪನಿ ಈ ಚಿತ್ರದ ಅಧಿಕೃತ ಘೋಷಣೆ ಮಾಡಿದೆ. ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ರಾಘವ ಲಾರೆನ್ಸ್ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಚಂದ್ರಮುಖಿ ಮೊದಲ ಭಾಗದಲ್ಲಿದ್ದ ಹಾಸ್ಯನಟ ವಡಿವೇಲು, ಈ ಸಿನಿಮಾದಲ್ಲೂ ಕೂಡ ರಾಘವ ಲಾರೆನ್ಸ್ ಜೊತೆಯಾಗಲಿದ್ದಾರೆ.
ಜುಲೈ 15 ರಿಂದ ಚಿತ್ರದ ಶೂಟಿಂಗ್ ಆರಂಭವಾಗಿದೆ. ಮೊದಲ 30 ದಿನಗಳ ಶೂಟಿಂಗ್ ಮೈಸೂರಿನಲ್ಲಿ ನಡೆಯಲಿದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಲಕ್ಷ್ಮೀ ಮೆನೆನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದ್ದಾರೆ. ಆದರೆ, ಈ ಬಗ್ಗೆ ಚಿತ್ರತಂದ ಎಲ್ಲೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಅಸಲಿ ವಿಚಾರಕ್ಕೆ ಈಗ ಬರೋಣ. ನಿನ್ನೆಯಿಂದ ಶೂಟಿಂಗ್ ಆರಂಭವಾಗಿದೆ. ಶೂಟಿಂಗ್ ಆರಂಭಕ್ಕೂ ಮುನ್ನ ರಾಘವ ಲಾರೆನ್ಸ್ ಅವರು ಚೆನ್ನೈನಲ್ಲಿರುವ ರಜಿನಿಕಾಂತ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಚಂದ್ರಮುಖಿ ಮೊದಲ ಭಾಗದಲ್ಲಿ ರಜಿನಿ ಅವರು ನಿರ್ವಹಿಸಿದ್ದ ಪಾತ್ರವನ್ನು ಎರಡನೇ ಭಾಗದಲ್ಲಿ ರಾಘವ ಲಾರೆನ್ಸ್ ನಿರ್ವಹಿಸುತ್ತಿರುವ ಕಾರಣ ಅವರ ಆಶೀರ್ವಾದದ ಜೊತೆಗೆ ಒಂದಿಷ್ಟು ಸಲಹೆಗಳನ್ನು ಪಡೆದು ಬಂದಿದ್ದಾರೆ. ಈ ಸಂಗತಿಯನ್ನು ಲಾರೆನ್ಸ್ ತಮ್ಮ ಟ್ವಿಟರ್ನಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ.
ಈ ಸಿನಿಮಾಗೆ ಪ್ರಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸಂಗೀತ ನೀಡಲಿದ್ದು, ಆರ್.ಡಿ. ರಾಜಶೇಖರ್ ಕ್ಯಾಮೆರಾ ನಿರ್ವಹಣೆ ಮಾಡಲಿದ್ದಾರೆ. ಲೈಕಾ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. (ಏಜೆನ್ಸೀಸ್)