More

    ಬ್ರಿಟನ್ ಕದನ ಕುತೂಹಲ.. ಪ್ರಧಾನಿ ಪಟ್ಟದತ್ತ ರಿಷಿ ಸುನಕ್ ದಾಪುಗಾಲು..

    ಬ್ರಿಟನ್ ಪ್ರಧಾನಿ ಪಟ್ಟಕ್ಕಾಗಿ ನಡೆಯುತ್ತಿರುವ ಸ್ಪರ್ಧೆಯ ಮೊದಲೆರಡು ಸುತ್ತುಗಳಲ್ಲಿ ಭಾರತೀಯ ಮೂಲದ ಬ್ರಿಟನ್ ಸಂಸದ ರಿಷಿ ಸುನಕ್ ಜಯ ಗಳಿಸಿದ್ದಾರೆ. ಹೀಗಿದ್ದರೂ, ಉನ್ನತ ಸ್ಥಾನ ತಲುಪಲು ದಾರಿ ಇನ್ನೂ ದೂರವಿದೆ. ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನದ ಆಯ್ಕೆಯಾಗಿ ನಡೆಯುತ್ತಿರುವ ಸ್ಪರ್ಧೆ ತೀವ್ರಗೊಂಡಿದ್ದು ಕುತೂಹಲಕಾರಿ ಘಟ್ಟ ತಲುಪಿದೆ.

    ಏನಿದು ಟೋರಿ ಲೀಡರ್​ಶಿಪ್ ಸ್ಪರ್ಧೆ?

    ಕನ್ಸರ್ವೆಟಿವ್ ಪಕ್ಷವನ್ನು ಟೋರಿ ಪಕ್ಷ ಎಂದೂ ಕರೆಯಲಾಗುತ್ತದೆ. ಸದ್ಯ ಬ್ರಿಟನ್​ನಲ್ಲಿ ಅದು ಅಧಿಕಾರದಲ್ಲಿದೆ. ಈ ಪಕ್ಷದ ನಾಯಕ ರಾಜೀನಾಮೆ ನೀಡಿದರೆ ಹೊಸ ನಾಯಕನನ್ನು ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಬ್ರಿಟನ್ ಪ್ರಧಾನಿಯಾಗಿದ್ದ ಕನ್ಸರ್ವೆಟಿವ್ ಪಕ್ಷದ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿರುವುದರಿಂದ ಪಕ್ಷದ ಹೊಸ ನಾಯಕನ ಆಯ್ಕೆ ನಡೆಯುತ್ತಿದೆ. ಇಲ್ಲಿ ನಾಯಕರಾಗಿ ಆಯ್ಕೆಯಾಗುವವರೇ ನೂತನ ಪ್ರಧಾನಿ ಕೂಡ ಆಗಲಿದ್ದಾರೆ. ಕನ್ಸರ್ವೆಟಿವ್ ಪಕ್ಷವು ತನ್ನ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನೇ ‘ಟೋರಿ ಲೀಡರ್​ಶಿಪ್ ಕಂಟೆಸ್ಟ್’ (ಟೋರಿ ಪಕ್ಷದ ನಾಯಕತ್ವ ಸ್ಪರ್ಧೆ) ಎಂದು ಕರೆಯಲಾಗುತ್ತದೆ. ಮೊದಲ ಸುತ್ತುಗಳಲ್ಲಿ ಪಕ್ಷದ ಸಂಸದರು ಈ ನಾಯಕತ್ವ ಸ್ಪರ್ಧೆಯಲ್ಲಿ ಮತದಾನ ಮಾಡುತ್ತಾರೆ.

    ಗುರುವಾರ ಜರುಗಿದ ಎರಡನೇ ಸುತ್ತಿನ ಸ್ಪರ್ಧೆಯಲ್ಲಿ ರಿಷಿ ಸುನಕ್ ಅವರು 101 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ಈ ಸುತ್ತಿನ ನಂತರ ಪ್ರಧಾನಿ ರೇಸ್​ನಲ್ಲಿ ಒಟ್ಟು ಐವರು ಉಳಿದುಕೊಂಡಿದ್ದಾರೆ. ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ (83 ಮತ), ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ (64 ಮತ), ಮಾಜಿ ಸಚಿವ ಕೆಮಿ ಬದೆನೊಚ್ (49), ಟಾಮ್ ಟುಗೆಂದಾತ್ (32) ಅವರು ಎರಡನೇ ಸುತ್ತಿನ ನಂತರ ರೇಸ್​ನಲ್ಲಿರುವ ಇತರರು.

    ಜುಲೈ 21ಕ್ಕೆ ಅಂತಿಮ ಹಂತ: ಐವರು ಕನ್ಸರ್ವೆಟಿವ್ ಸಂಸದರು ಮೂರನೇ ಸುತ್ತಿಗೆ ಸಾಗಿದ್ದಾರೆ. ಪಕ್ಷದ 358 ಸಂಸದರಲ್ಲಿ ಸುನಕ್ ಅವರು ಈಗ 101 ಮಂದಿಯ ಬೆಂಬಲ ಹೊಂದಿದ್ದಾರೆ. ಅವರು ಮೊದಲ ಸುತ್ತಿನಲ್ಲಿ 88 ಮತಗಳನ್ನು ಪಡೆದಿದ್ದು, ಎರಡನೇ ಸುತ್ತಿನಲ್ಲಿ ಸುಧಾರಿಸಿಕೊಂಡಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ, ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ ತಮ್ಮ ಬೆಂಬಲದ ಸಂಖ್ಯೆಯನ್ನು 67 ರಿಂದ 83ಕ್ಕೆ ಏರಿಸಿಕೊಂಡಿದ್ದಾರೆ. ಇನ್ನೊಬ್ಬ ಭಾರತೀಯ ಮೂಲದ ಸಂಸದ ಸುಯೆಲ್ಲಾ ಬ್ರೇವರ್​ವುನ್ ಅವರು ಗುರುವಾರ ನಡೆದ ಎರಡನೇ ಸುತ್ತಿನಲ್ಲಿ ಸ್ಪರ್ಧೆಯಿಂದ ನಿರ್ಗಮಿಸಿದ್ದಾರೆ. ಜುಲೈ 21ಕ್ಕೆ ಅಂತಿಮ ಸ್ಪರ್ಧೆ ಜರುಗಲಿದೆ. ಅಂತಿಮ ಸುತ್ತಿಗೆ ಇಬ್ಬರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಅಲ್ಲಿಯವರೆಗೆ ಮತದಾನ ಮುಂದುವರಿದು ಈಗ ರೇಸ್​ನಲ್ಲಿರುವ ಐವರ ಪೈಕಿ ಮೂವರು ಸ್ಪರ್ಧೆಯಿಂದ ಹೊರಹೋಗುತ್ತಾರೆ. ಕೊನೆಯ ಸುತ್ತಿನ ಸ್ಪರ್ಧೆಯಲ್ಲಿ, ಕನ್ಸರ್ವೆಟಿವ್ ಪಕ್ಷದ ಸರಿಸುಮಾರು 2 ಲಕ್ಷ ಸದಸ್ಯರು ಸೇರಿಕೊಂಡು ನಾಯಕನನ್ನು ಆಯ್ಕೆ ಮಾಡುತ್ತಾರೆ.

    ಆರ್ಥಿಕ ಕ್ರಮಗಳು: ಕೋವಿಡ್ ಸಾಂಕ್ರಾಮಿಕ ಹರಡಿದ ಸಮಯದಲ್ಲಿ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಸುನಕ್ ಅವರು ವ್ಯಾಪಾರ ವಲಯಕ್ಕೆ ಹಣಕಾಸಿನ ನೆರವು ನೀಡಿದ್ದು ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು. ಆತಿಥ್ಯ ಉದ್ಯಮಕ್ಕೆ ಸಹಾಯ ಮಾಡಲು ಅವರು ‘ಈಟ್ ಔಟ್ ಟು ಹೆಲ್ಪ್ ಔಟ್’ ಎಂಬ ಕಾರ್ಯಕ್ರಮ ಸಹ ರೂಪಿಸಿದರು. ಜೀವನ ವೆಚ್ಚದ ಮೇಲೆ ಕೋವಿಡ್ ಮತ್ತು ಯೂಕ್ರೇನ್-ರಷ್ಯಾ ಯುದ್ಧದ ಪರಿಣಾಮಗಳನ್ನು ಸರಿದೂಗಿಸಲು, ಕನಿಷ್ಠ ವೇತನವನ್ನು ಅವರು ಹೆಚ್ಚಿಸಿದರು. ಇಂಧನ ಮತ್ತು ತೈಲ ಸಬ್ಸಿಡಿ ನೀಡಿದರು. 2024ರಲ್ಲಿ ಆದಾಯ ತೆರಿಗೆಯನ್ನು ಕಡಿಮೆ ಮಾಡುವ ಭರವಸೆಯನ್ನೂ ಅವರು ನೀಡಿದ್ದಾರೆ.

    ಬೋರಿಸ್ ಜಾನ್ಸನ್ ರಾಜೀನಾಮೆ: ಮೂರು ವರ್ಷಗಳ ಹಿಂದೆಯಷ್ಟೇ ಬೋರಿಸ್ ಜಾನ್ಸನ್ ಅವರು ಕನ್ಸರ್ವೆಟಿವ್ ಪಕ್ಷಕ್ಕೆ ಸಂಸತ್ ಚುನಾವಣೆಯಲ್ಲಿ ಬಹುದೊಡ್ಡ ಗೆಲುವು ತಂದುಕೊಟ್ಟಿದ್ದರು. 1987ರ ನಂತರ ಪಕ್ಷದ ಅತಿ ದೊಡ್ಡ ಗೆಲುವು ಇದಾಗಿತ್ತು. ಆದರೆ, ಕಳೆದ ಜುಲೈ 27ರಂದು ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೋವಿಡ್ ಕಾರಣ ದೇಶದ ಆರ್ಥಿಕ ದುಸ್ಥಿತಿ, ಹಣದುಬ್ಬರ, ತಮ್ಮ ನಿವಾಸ ಡೌನಿಂಗ್ ಸ್ಟ್ರೀಟ್​ನಲ್ಲಿ ಮದ್ಯದ ಪಾರ್ಟಿ ಆಯೋಜನೆ, ಕೋವಿಡ್ ಲಾಕ್​ಡೌನ್ ನಿಯಮಾವಳಿ ಉಲ್ಲಂಘನೆ ಮುಂತಾದ ಬಿಕ್ಕಟ್ಟು ಹಾಗೂ ಹಗರಣಗಳಿಗೆ ಕಾರಣವಾಗಿ ಅವರು ವಿವಾದಕ್ಕೆ ಸಿಲುಕಿದರು. ಇತ್ತೀಚಿನ ದಿನಗಳಲ್ಲಿ ಅವರ ಸರ್ಕಾರದ 29 ಸಚಿವರು ಹಾಗೂ 50ಕ್ಕೂ ಹೆಚ್ಚಿನ ಹಿರಿಯ ಅಧಿಕಾರಿಗಳು ರಾಜೀನಾಮೆ ನೀಡಿದ್ದರಿಂದ ಸರ್ಕಾರ ನಡೆಸುವುದು ಅವರಿಗೆ ಅಸಾಧ್ಯ ಎನ್ನುವ ಪರಿಸ್ಥಿತಿ ತಲೆದೋರಿ ರಾಜೀನಾಮೆ ನೀಡುವಂತಾಯಿತು.

    ಬ್ರಿಟನ್ ಸಂಸತ್ ಬಲಾಬಲ: ಬ್ರಿಟನ್​ನಲ್ಲಿ ಪ್ರಮುಖವಾಗಿ ಎರಡು ಪಕ್ಷಗಳಿವೆ. ಒಂದು ಕನ್ಸರ್ವೆಟಿವ್, ಇನ್ನೊಂದು ಎಡಪಂಥೀಯ ಧೋರಣೆಯ ಲೇಬರ್ ಪಾರ್ಟಿ. ಇದಲ್ಲದೆ, ಸ್ಕಾಟಿಷ್ ನ್ಯಾಷನಲ್ ಪಾರ್ಟಿ, ಲಿಬರಲ್ ಡೆಮಾಕ್ರಾಟ್ಸ್ ಎಂಬ ಪಕ್ಷಗಳೂ ಇವೆ. ಬ್ರಿಟನ್ ಸಂಸತ್​ನ ಒಟ್ಟು ಸದಸ್ಯರ ಸಂಖ್ಯೆ 650. ಇದರಲ್ಲಿ 358 ಸದಸ್ಯರ ಬಹುಮತದೊಂದಿಗೆ ಕನ್ಸರ್ವೆಟಿವ್ ಪಕ್ಷ ಅಧಿಕಾರದಲ್ಲಿದೆ. ಲೇಬರ್ ಪಾರ್ಟಿ 200, ಸ್ಕಾಟಿಷ್ ನ್ಯಾಷನಲ್ ಪಾರ್ಟಿ 44, ಲಿಬರಲ್ ಡೆಮಾಕ್ರಾಟ್ 14 ಸದಸ್ಯರನ್ನು ಹೊಂದಿವೆ.

    ಸುನಕ್ ಜಾತಕ: 42 ವರ್ಷದ ರಿಷಿ ಸುನಕ್ ಅವರು 1980ರಲ್ಲಿ ಸೌತಾಂಪ್ಟನ್​ನಲ್ಲಿ ಜನಿಸಿದರು. ಪೂರ್ವ ಆಫ್ರಿಕಾ ದಿಂದ ಇಂಗ್ಲೆಂಡ್​ಗೆ ವಲಸೆ ಬಂದ ಭಾರತೀಯ ಮೂಲದ ದಂಪತಿಯ ಪುತ್ರ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಹಾಗೂ ಅರ್ಥಶಾಸ್ತ್ರ ಅಧ್ಯಯನ ಕೈಗೊಂಡಿದ್ದಾರೆ. ಅಮೆರಿಕದ ಸ್ಟಾ್ಯನ್​ಫರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಗಳಿಸಿದ್ದಾರೆ. ಅಲ್ಲಿಯೇ ಅವರು ಇನ್ಪೋಸಿಸ್ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿಯವರ ಪುತ್ರಿ ಅಕ್ಷತಾ ಅವರನ್ನು ಭೇಟಿಯಾಗಿದ್ದು. ಮುಂದೆ ಅವರಿಬ್ಬರು ವಿವಾಹವಾದರು.

    ರಿಷಿ ಅನೇಕ ಹೂಡಿಕೆ ಕಂಪನಿಗಳಲ್ಲಿ ಕೆಲಸ ಮಾಡುವ ಮೂಲಕ ಕೋಟ್ಯಧೀಶರಾದರು. ಅಕ್ಷತಾ ಹಾಗೂ ರಿಷಿ ಅವರ ಒಟ್ಟಾರೆ ಗಳಿಕೆ 730 ಮಿಲಿಯನ್ ಪೌಂಡ್ (6901 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದ್ದು, ಅವರು ಬ್ರಿಟನ್ನಿನ ಶ್ರೀಮಂತ ಸಂಸದರಾಗಿ ಹೊರಹೊಮ್ಮಿದ್ದಾರೆ.

    ರಿಚ್ಮಂಡ್ ಕ್ಷೇತ್ರದಿಂದ ಕನ್ಸರ್ವೆಟಿವ್ ಪಕ್ಷದ ಸಂಸದರಾಗಿ 2015ರಲ್ಲಿ ರಿಷಿ ಆಯ್ಕೆಯಾದರು. 2016ರ ಜನಾಭಿಪ್ರಾಯ ಸಂಗ್ರಹದಲ್ಲಿ ಬ್ರೆಕ್ಸಿಟ್ (ಬ್ರಿಟನ್ ಮತ್ತು ಎಕ್ಸಿಟ್ ಸೇರಿ ಬ್ರೆಕ್ಸಿಟ್ ಪದ ಹೊರಹೊಮ್ಮಿದೆ. ಅಂದರೆ, ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಬೇಕು ಎಂಬುದು.) ಅನ್ನು ಬೆಂಬಲಿಸಿದರು. 2017ರಲ್ಲಿ ಸಂಸದರಾಗಿ ಪುನರಾಯ್ಕೆಯಾಗಿ, ಅಂದಿನ ಪ್ರಧಾನಿ ತೆರೆಸಾ ಮೇ ಸಂಪುಟದಲ್ಲಿ ಕಿರಿಯ ಸಚಿವರಾದರು. 2019ರಲ್ಲಿ ಸರ್ಕಾರಿ ಖಜಾನೆಯ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾದರು. ನಂತರ ಇಂಗ್ಲೆಂಡ್ ರಾಣಿಗೆ ಸಲಹೆ ನೀಡುವ ಪ್ರಿವಿ ಕೌನ್ಸಿಲ್​ನ ಸದಸ್ಯರೂ ಆದರು. 2020ರಲ್ಲಿ ಖಜಾನೆಯ ಚಾನ್ಸಲರ್ ಕೂಡ ಆದರು. ಬೋರಿಸ್ ಜಾನ್ಸನ್ ಅವರ ಹಗರಣಗಳನ್ನು ವಿರೋಧಿಸಿ ಪ್ರತಿಭಟನೆಗಳು ಆರಂಭವಾದ ಹಿನ್ನೆಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಸುನಕ್ ಅವರು ಕ್ಯಾಬಿನೆಟ್​ಗೆ ರಾಜೀನಾಮೆ ನೀಡಿದರು.

    ಸರ್ಕಾರದ ಈ ಆದೇಶಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ!; ಆರ್ಡರ್ ಹಿಂಪಡೆಯಲು ಆಗ್ರಹ..

    ಲಲಿತ್ ಮೋದಿ-ಸುಶ್ಮಿತಾ ಸೇನ್​ ಡೇಟಿಂಗ್​; ಸುಶ್ಮಿತಾ ತಂದೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts