ಎಲೆಕ್ಷನ್ ದೃಷ್ಟಿ, ವರ್ಚಸ್ಸಿಗೆ ಪುಷ್ಟಿ: ಬಿಜೆಪಿ ಚಿಂತನ ಸಭೆ; ಮಿಷನ್ 150 ಗುರಿ ಸಾಧಿಸುವ ಸಂಕಲ್ಪ..

BJP
Published on

ಬೆಂಗಳೂರು: ಮುಂಬರುವ ಚುನಾವಣೆಗಳತ್ತ ದೃಷ್ಟಿನೆಟ್ಟು ರಾಜ್ಯ ಸರ್ಕಾರದ ವರ್ಚಸ್ಸು ವೃದ್ಧಿಗೆ ಪುಷ್ಟಿ ನೀಡುವ ಸಮಾವೇಶಗಳು, ಯಾತ್ರೆಗಳು, ಜಾತಿ-ವರ್ಗ ಸಮ್ಮೇಳನಗಳನ್ನು ಹಮ್ಮಿಕೊಳ್ಳಲು ಬಿಜೆಪಿ ಹುರುಪಿನಿಂದ ತಯಾರಾಗಿದೆ. ದೇವನಹಳ್ಳಿಯ ರೆಸಾರ್ಟ್​ನಲ್ಲಿ ಶುಕ್ರವಾರ ನಡೆದ ಪಕ್ಷದ ಚಿಂತನೆ ಸಭೆಯಲ್ಲಿ ಕಳೆದ ಮೂರು ಚುನಾವಣೆಗಳ ಅವಲೋಕನ, ಸರ್ಕಾರ ಮತ್ತು ಪಕ್ಷದ ಸಾಧನೆ-ವೈಫಲ್ಯಗಳನ್ನು ಬಗ್ಗೆ ಸುದೀರ್ಘವಾಗಿ ರ್ಚಚಿಸಿದೆ. ಪಕ್ಷದ ವರಿಷ್ಠರು ಹಾಕಿಕೊಟ್ಟ ಮಾರ್ಗಸೂಚಿ ಅನ್ವಯ ಜನರನ್ನು ತಲುಪಲು ಏನೆಲ್ಲ ಮಾಡಬೇಕು ಎಂಬ ಬಗ್ಗೆ ವಿಚಾರ-ವಿನಿಯಮ ನಡೆಸಿ, ಐದಂಶಗಳ ಸೂತ್ರಗಳು ಮತ್ತು ಆರು ಪ್ರಮುಖ ನಿರ್ಧಾರಗಳ ಅನುಷ್ಠಾನಕ್ಕೆ ನೀಲಿನಕ್ಷೆ ಸಿದ್ಧಪಡಿಸಿದೆ.

ಅಧಿಕ ಆದ್ಯತೆ: ಮುಂಬರುವ ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಮೇಲುಗೈ ಸಾಧಿಸಲೇಬೇಕು. ಇದಕ್ಕಾಗಿ ಬೇಕಾದ ಸಿದ್ಧತೆಗಳನ್ನು ತಕ್ಷಣದಿಂದ ಪ್ರಾರಂಭಿಸಿ ಜನರ ಮನಗೆಲ್ಲುವುದಕ್ಕೆ ಕಾರ್ಯತಂತ್ರ ಹೆಣೆಯಬೇಕು ಎಂದು ಸಭೆ ಸೂಚಿಸಿದೆ. ಈ ಚುನಾವಣೆಗಳಲ್ಲಿ ಜಯ ಸಾಧಿಸಿದರೆ 2023ರ ವಿಧಾನಸಭೆ ಚುನಾವಣೆಗೆ ಭದ್ರ ಬುನಾದಿ ಹಾಕಿದಂತಾಗುತ್ತದೆ. ಹಿಂದಿನ ಕೆಲವು ಲೋಪದೋಷ ಮರುಕಳಿಸದಂತೆ ನೋಡಿಕೊಂಡು ಮಿಷನ್ 150 ಗುರಿ ಸಾಧಿಸಲೇಬೇಕು. ಎರಡು ಬಾರಿ ಮತ್ತೊಂದು ಪಕ್ಷದ ಅವಲಂಬನೆಯಿಂದ ಪಾಠ ಕಲಿತಿದ್ದೇವೆ. ಯಾವುದೇ ಕಾರಣಕ್ಕೂ ಗೆಲುವಿನ ಸ್ಥಾನಗಳು 125ಕ್ಕಿಂತ ಕೆಳಗೆ ಇಳಿಯಬಾರದು. ಪ್ರತಿಯೊಬ್ಬ ಸಚಿವರು ಗೆಲ್ಲುವ ಜತೆಗೆ 3-4 ಸ್ಥಾನಗಳನ್ನು ಗೆಲ್ಲಿಸಿಕೊಂಡು ಜವಾಬ್ದಾರಿ ನಿಭಾಯಿಸಬೇಕು.

ಫಲಾನುಭವಿಗಳಿಗೆ ತಲುಪಿರಿ: ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜು.28ಕ್ಕೆ ಒಂದು ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಸಾಧನಾ ಸಮಾವೇಶ ಸಂಘಟಿಸಿ, ಜಾರಿಗೊಳಿಸಿದ ಯೋಜನೆ ಮತ್ತು ಕಾರ್ಯಕ್ರಮಗಳ ಪ್ರಚಾರ ಮಾಡಿ ಫಲಾನುಭವಿಗಳನ್ನು ತಲುಪಬೇಕು. ನಂತರದ ಹಂತದಲ್ಲಿ ಜಿಲ್ಲಾವಾರು ಸಾಧನಾ ಸಮ್ಮೇಳನ, ಆಯಾ ಜಾತಿ-ವರ್ಗಗಳ ಸಮಾವೇಶ ಏರ್ಪಡಿಸಿ ಸರ್ಕಾರ ನೀಡಿದ ಕೊಡುಗೆಗಳ ಅರಿವು ಮೂಡಿಸಬೇಕು.

ಕಾಂಗ್ರೆಸ್​ಗೆ ದಿಟ್ಟ ಎದಿರೇಟು: ಕಾಂಗ್ರೆಸ್​ಗೆ ದಿಟ್ಟ ಉತ್ತರ ನೀಡುವ ಜತೆಗೆ ಇನ್ನಷ್ಟು ಆಕ್ರಮಣಮಕಾರಿ ತಂತ್ರ ಅಳವಡಿಸಿಕೊಂಡು, ಭಾರತ್ ಜೋಡೋ ಯಾತ್ರೆಗೆ ಪ್ರತಿಯಾಗಿ ಸರ್ಕಾರದ ಜನಪರ ಯಾತ್ರೆಗಳನ್ನು ಆಯೋಜಿಸಲು ಸಭೆ ನಿರ್ಧರಿಸಿದೆ. ಅದೇ ರೀತಿಯಲ್ಲಿ ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಪ್ರತಿಯಾಗಿ ಪಕ್ಷದ ಸಮಾವೇಶ ನಡೆಸಲು ತೀರ್ವನಿಸಲಾಗಿದೆ.

ಆರು ವಿಭಾಗಗಳಲ್ಲಿ ಸಂಘಟನಾ ಪ್ರವಾಸ: ರಾಜ್ಯ ನಾಯಕರ ತಂಡಗಳು ತಕ್ಷಣದಿಂದ ಸಂಘಟನಾ ಪ್ರವಾಸಕ್ಕೆ ಸಜ್ಜಾಗಬೇಕು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಲೆನಾಡು-ಕರಾವಳಿ, ಮಧ್ಯ ಕರ್ನಾಟಕ, ಹಳೇ ಮೈಸೂರು ಮತ್ತು ಬೆಂಗಳೂರು ನಗರ, ಗ್ರಾಮಾಂತರ-ರಾಮನಗರ ಜಿಲ್ಲೆಗಳನ್ನು ಒಳಗೊಂಡು ವಿಭಾಗವಾರು ಸಂಚಾರ ಕೈಗೊಳ್ಳಬೇಕು. ಪ್ರತಿಯೊಬ್ಬ ಕಾರ್ಯಕರ್ತನ ಬೇಸರ, ಅಸಮಾಧಾನ ತಣಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವಂತಾದರೆ ಬರುವ ಚುನಾವಣೆಗಳಲ್ಲಿ ಅವರಿಂದ ಕೆಲಸ ತೆಗೆದುಕೊಳ್ಳಲು ಸಾಧ್ಯವಿದೆ. ಹಾಗೆಯೇ ಬಿಡುವಿಲ್ಲದ ಸಂಘಟನಾ ಚಟುವಟಿಕೆಗಳು ಸರ್ಕಾರ ಮತ್ತು ಪಕ್ಷದ ಬಗ್ಗೆ ಜನರಲ್ಲೂ ಸದಾಭಿಪ್ರಾಯ ಮೂಡಿಸಲು ನೆರವಾಗಲಿದೆ. ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಹಂಚಿಕೆ ವಿಷಯದಲ್ಲಿ ಊಹಾಪೋಹ ಹರಡದಂತೆ ಎಚ್ಚರಿಕೆವಹಿಸಿ, ಅನಗತ್ಯ ಗೊಂದಲಗಳನ್ನು ನಿವಾರಿಸುವ ಮತ್ತೊಂದು ಸೂತ್ರವನ್ನು ಸಭೆ ಕಟ್ಟಿಕೊಟ್ಟಿದೆ.

ಸಾಮಾಜಿಕ ಜಾಲತಾಣ ಸಮರ್ಥ ಬಳಕೆ: ಜನಾಭಿಪ್ರಾಯ ಮೂಡಿಸಲು, ಸರ್ಕಾರದ ಸಾಧನೆ ಮಂಡಿಸಲು, ಪಕ್ಷದ ಪರ ಅಲೆ ಸೃಷ್ಟಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳು ಪರಿಣಾಮಕಾರಿಯಾಗಿವೆ. ಪ್ರಭಾವಪೂರ್ಣ ವೇದಿಕೆ ಸಮರ್ಥವಾಗಿ ಬಳಸಿಕೊಳ್ಳಲು ಉತ್ಸಾಹಿ ತಂಡವನ್ನು ನಿಯೋಜಿಸಿ, ಒಳ್ಳೆಯ ಕೆಲಸಗಳನ್ನು ಬಿಟ್ಟುಬಿಡದೆ ಬಿಂಬಿಸುವಂತಾಗಬೇಕು. ಪ್ರತಿಪಕ್ಷಗಳ ಆರೋಪ, ಅನಗತ್ಯ ವಿವಾದಗಳು ನಗಣ್ಯವಾಗಿ ಜನರಲ್ಲಿ ಸಕಾರಾತ್ಮಕ ಭಾವನೆ ಮೂಡಿಸಲು ಸಾಧ್ಯವಿದೆ ಎಂಬ ನಿಲುವು ಸಭೆ ವ್ಯಕ್ತಪಡಿಸಿತು ಎಂದು ಮೂಲಗಳು ತಿಳಿಸಿವೆ. ಇದೇ ಸಂದರ್ಭದಲ್ಲಿ 2008, 2013 ಮತ್ತು 2018ರ ಚುನಾವಣಾ ಫಲಿತಾಂಶ ಅವಲೋಕನ, ರಾಜಕೀಯ ವಿದ್ಯಮಾನ, ಪಕ್ಷದ ಸಾಧನೆ ವೈಫಲ್ಯ, ಸರ್ಕಾರದ ಜನರಲ್ಲಿ ಉತ್ತಮ ಭಾವನೆ ಮೂಡಿಸುವಲ್ಲಿ ಹಿಂದೆಬಿದ್ದಿದ್ದೇಕೆ ಇತ್ಯಾದಿ ವಿಷಯಗಳು ಪರಾಮರ್ಶೆಯಾದವು ಎನ್ನಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಪಕ್ಷದ ರಾಜ್ಯಾಧ್ಯಕ್ಷ, ಆಯ್ದ ಸಚಿವರು, ಪದಾಧಿಕಾರಿಗಳು, ಶಾಸಕರು ಸೇರಿ 41 ಜನರು ಭಾಗವಹಿಸಿದ್ದರು. ಆಹ್ವಾನಿತರು ಹೊರತುಪಡಿಸಿ ಸಚಿವ, ಶಾಸಕರ ಆಪ್ತ ಸಹಾಯಕರು, ವಾಹನಗಳ ಚಾಲಕರನ್ನು ರೆಸಾರ್ಟ್​ನಿಂದ ಹೊರಗೆ ಕಳುಹಿಸಲಾಗಿತ್ತು.

ಪ್ರಮುಖ ನಿರ್ಧಾರಗಳು

  • ದೊಡ್ಡಬಳ್ಳಾಪುರದಲ್ಲಿ ಜು.28ಕ್ಕೆ ವರ್ಷದ ಸಾಧನಾ ಸಮಾವೇಶ
  • ಎರಡನೇ ಹಂತದಲ್ಲಿ ಜಿಲ್ಲಾವಾರು ಸಮ್ಮೇಳನ ಆಯೋಜನೆ
  • ನಂತರ ಜಾತಿ-ವರ್ಗವಾರು ಸಮಾವೇಶ ಸಂಘಟಿಸಿ ಕೊಡುಗೆಗಳ ಮಾಹಿತಿ
  • ಆರು ವಿಭಾಗಗಳಲ್ಲಿ ರಾಜ್ಯ ನಾಯಕರ ತಂಡಗಳ ಸಂಘಟನಾ ಪ್ರವಾಸ
  • ಸಾಮಾಜಿಕ ಜಾಲತಾಣಗಳ ಸಮರ್ಪಕ ಬಳಕೆಗೆ ಉತ್ಸಾಹಿ ತಂಡ ನಿಯೋಜನೆ

ಐದಂಶಗಳ ಸೂತ್ರಗಳು

  • ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ
  • ಸಂಘಟನೆ ಮೊದಲು, ಟಿಕೆಟ್ ವಿಚಾರ ನಂತರ
  • ಪ್ರತಿಯೊಬ್ಬ ಸಚಿವರಿಗೆ ಜವಾಬ್ದಾರಿ ನಿಗದಿ
  • ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೆಚ್ಚಿನ ಒತ್ತು
  • ಕಾಂಗ್ರೆಸ್ ವಿರುದ್ಧ ಇನ್ನಷ್ಟು ಆಕ್ರಮಣಕಾರಿ ತಂತ್ರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net