

ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ಮರಣದಿಂದ ಇಡೀ ಚಿತ್ರರಂಗವೇ ಆಘಾತಕ್ಕೆ ಒಳಗಾಗಿದೆ. ಕೋಟ್ಯಂತರ ಅಭಿಮಾನಿಗಳು ನೆಚ್ಚಿನ ನಟನ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇಡೀ ಭಾರತೀಯ ಚಿತ್ರರಂಗದ ಬಹುತೇಕ ಗಣ್ಯರು ಅಪ್ಪುವಿನ ಮುಖವನ್ನು ಕೊನೆಯದಾಗಿ ಕಣ್ತುಂಬಿಕೊಳ್ಳುತ್ತಿದ್ದಾರೆ. ನಟ ಸುದೀಪ್ ಕೂಡ ನಿನ್ನೆ ಸದಾಶಿವ ನಗರದ ನಿವಾಸಕ್ಕೆ ಭೇಟಿ ನೀಡಿ ಅಪ್ಪು ದರ್ಶನ ಪಡೆದುಕೊಂಡಿದ್ದಾರೆ. ಸುದೀಪ್ ಮತ್ತು ಅಪ್ಪು ಬಾಲ್ಯದ ಸ್ನೇಹಿತರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೀಗ ಗೆಳೆಯನ ಅಕಾಲಿಕ ನಿಧನದಿಂದ ಶಾಕ್ ಆಗಿರುವ ಸುದೀಪ್, ಸುದೀರ್ಘವಾಗಿ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.
ಪುನೀತ್ ಹುಟ್ಟಿನಿಂದಲೇ ಸ್ಟಾರ್ ಎಂದಿರುವ ಕಿಚ್ಚ, ಬಾಲ್ಯದಿಂದಲೇ ಅಪ್ಪು ಜರ್ನಿ ಶುರುವಾಯಿತು. ಭಾರೀ ಯಶಸ್ಸು ಗಳಿಸಿದ ಭಾಗ್ಯವಂತ ಚಿತ್ರದ ವಿಜಯೋತ್ಸವದ ಯಾತ್ರೆ ವೇಳೆ ಶಿವಮೊಗ್ಗದಲ್ಲಿ ನಾನು ಮೊದಲ ಬಾರಿಗೆ ಪುನೀತ್ ಅವರನ್ನು ಭೇಟಿ ಮಾಡಿದಾಗಲೇ ಅವರು ಸ್ಟಾರ್ ಆಗಿದ್ದರು. ಅಂದು ನಮ್ಮ ತಂದೆ ಚಿತ್ರರಂಗದಲ್ಲಿ ಪರಿಚಿತರಾಗಿದ್ದರಿಂದ ಪುನೀತ್ರನ್ನು ಮನೆಗೆ ಮಧ್ಯಾಹ್ನದ ಊಟಕ್ಕೆ ಮನೆಗೆ ಕರೆಸಿದ್ದರು. ಅದೇ ಮೊದಲ ಬಾರಿಗೆ ಪುನೀತ್ರನ್ನು ನಾನು ಭೇಟಿಯಾದೆ. ಬಹುಶಃ ವಯಸ್ಸಿನ ಅಂಶವೂ ನಮ್ಮಿಬ್ಬರನ್ನು ತಕ್ಷಣ ಹೊಂದಿಕೊಳ್ಳುವಂತೆ ಮಾಡಿತು. ಅಪ್ಪುಗೆ ಊಟಕ್ಕಿಂತ ನನ್ನ ಗೊಂಬೆಗಳ ಮೇಲೆಯೇ ಹೆಚ್ಚು ಆಸಕ್ತಿ ಇತ್ತು. ನನಗೆ ಈಗಲೂ ನೆನಪಿದೆ. ಪುನೀತ್ಗೆ ಊಟ ಮಾಡಿಸಲು ಮಹಿಳೆಯೊಬ್ಬರು ತಟ್ಟೆ ಹಿಡಿದುಕೊಂಡು ಹಿಂದಿನಿಂದ ಓಡೋಡಿ ಬರುತ್ತಿದ್ದರು. ಆದರೆ, ಪುನೀತ್ ಆಟದಲ್ಲಿ ಬಿಜಿಯಾಗಿದ್ದ. ಅವರ ಉತ್ಸಾಹ ನೋಡಿ ನಮಗೂ ಇನ್ನು ಹೆಚ್ಚು ಉತ್ಸಾಹವಾಯಿತು.
ಅಂದು ನನ್ನ ಮನೆಯ ಸುತ್ತ ನನ್ನನ್ನು ಸೇರಿ ಅನೇಕ ಮಕ್ಕಳು ಸುತ್ತುವರಿದಿದ್ದರು. ಅದಕ್ಕೆ ಕಾರಣ ಪುನೀತ್. ಏಕೆಂದರೆ ಪುನೀತ್ ಚಿತ್ರರಂಗದ ದಿಗ್ಗಜ ರಾಜ್ಕುಮಾರ್ ಪುತ್ರರಾಗಿದ್ದರಿಂದ ಪುನೀತ್ರನ್ನು ನೋಡಲು ಅನೇಕರು ಮನೆ ಮುಂದೆ ಕಿಕ್ಕಿರಿದು ನಿಂತಿದ್ದರು. ಇದಾದ ಬಳಿಕ ಆಗಾಗ ಇಬ್ಬರು ಭೇಟಿಯಾದೆವು. ನಂತರ ಇಬ್ಬರು ಇಂದೇ ಚಿತ್ರರಂಗದಲ್ಲಿ ಸಹೋದ್ಯೋಗಿಗಳು ಆದ ಬಳಿಕ ಇನ್ನಷ್ಟು ಹತ್ತಿರವಾದೆವು. ಸ್ನೇಹಿತರಾಗಿ ಮಾತ್ರವಲ್ಲ ಆರೋಗ್ಯಕ್ಕರ ಸ್ಪರ್ಧಾಳುವಾಗಿಯು ನಿಂತರು. ಪುನೀತ್ ಓರ್ವ ಅದ್ಭುತ ಕಲಾವಿದ, ಡ್ಯಾನ್ಸರ್, ಫೈಟರ್ ಮತ್ತು ಶ್ರೇಷ್ಠ ವ್ಯಕ್ತಿ ಎಂದು ಸುದೀಪ್ ಕೊಂಡಾಡಿದ್ದಾರೆ.
ಆತನೊಂದಿಗಿನ ಆರೋಗ್ಯಕರ ಸ್ಫರ್ಧೆಯಲ್ಲಿ ನಾನು ಉತ್ತಮವಾದದ್ದನ್ನು ನೀಡಲು ಸಾಧ್ಯವಾಗುತ್ತಿತ್ತು. ಅಂತಹ ಮಹಾನ್ ನಟನ ಪೀಳಿಗೆಯಲ್ಲಿ ನಾನು ಜತೆಯಾದೆ ಎಂಬುದೇ ನನ್ನ ಗೌರವ ಮತ್ತು ಸಂತೋಷ. ಇಂದು ಸಿನಿಮಾ ಇಂಡಸ್ಟ್ರಿಯಲ್ಲಿ ಅಪೂರ್ಣ ಎಂಬ ಭಾವ ಕಾಡುತ್ತಿದೆ. ಇದೊಂದು ಕರಾಳ ದಿನ. ಸಮಯ ಕ್ರೂರಿಯಂತೆ ಕಾಣುತ್ತಿದೆ. ಸ್ಥಳವೆಲ್ಲ ದುಃಖ ಆವರಿಸಿದೆ. ನಿನ್ನೆ ನೋಡಿದಾಗ ಪ್ರಕೃತಿಯೇ ಅಳುತ್ತಾ, ಸಂತಾಪ ಸೂಚಿಸುತ್ತಿರುವಂತೆ ಗೋಚರವಾಯಿತು. ನಾನು ಬೆಂಗಳೂರಿಗೆ ಲ್ಯಾಂಡ್ ಆಗುತ್ತಿದ್ದಂತೆ ಆತನಿರುವ ಕಡೆ ಧಾವಿಸಿದೆ. ನನ್ನ ಉಸಿರಾಟ ನನಗೆ ಭಾರವೆನಿಸಿತು. ವಾಸ್ತವವನ್ನು ಒಪ್ಪಿಕೊಳ್ಳಲು ನನ್ನಿಂದ ಆಗಲಿಲ್ಲ. ಎಲ್ಲರ ಎದೆಯ ಮೇಲೆ ಬೆಟ್ಟದ ರೀತಿಯಲ್ಲಿ ಮಲಗಿರುವುದನ್ನು ನೋಡಿ, ಅನೇಕ ಆಲೋಚನೆಗಳು ಬಂದಿತು. ಇದೆಲ್ಲ ಹೇಗಾಯಿತು ಅನಿಸಿತು. ಮೊದಲ ಬಾರಿಗೆ ಸಹಜವಾಗಿ ಉಸಿರಾಡಲು ನನಗೆ ಆಗಲಿಲ್ಲ. ಇನ್ಮುಂದೆ ಆತನನ್ನು ನೋಡಲಾಗುವುದಿಲ್ಲ ಎಂಬ ನೋವು ಕಾಡುತ್ತಿದೆ ಎಂದು ಸುದೀಪ್ ಭಾವುಕರಾದರು.
ಶಿವಣ್ಣ ಸ್ಥಿತಿ ನೋಡಿ ಮನಸ್ಸಿಗೆ ಮತ್ತಷ್ಟು ನೋವಾಯಿತು. ಪುನೀತ್ ನನಗಿಂತ 13 ವರ್ಷ ಚಿಕ್ಕವನು ಅವನನ್ನು ನನ್ನ ತೋಳಲ್ಲಿ ಎತ್ತಿ ಆಡಿಸಿದ್ದೇನೆ. ಇಲ್ಲಿಯವರೆಗೆ ಸಾಕಷ್ಟು ನೋಡಿದ್ದೇನೆ, ಇನ್ನೇನು ನೋಡಲು ನಾನು ಇರಬೇಕು ಎಂದು ಶಿವಣ್ಣ ಹೇಳಿದ ಮಾತು ಈಗಲು ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ. ಎಲ್ಲರು ಶಾಕ್ಗೆ ಒಳಗಾಗಿದ್ದಾರೆ. ಈ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ನನಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಆತನ ಜಾಗವನ್ನು ಯಾರು ತುಂಬಲು ಆಗುವುದಿಲ್ಲ. ಪುನೀತ್ ನಮ್ಮ ಪ್ರೀತಿಯ ಅಪ್ಪು ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಸುದೀರ್ಘವಾಗಿ ಸುದೀಪ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.