

ಹೈದರಾಬಾದ್: ಕರೊನಾ ಕಾಲದಲ್ಲಿ ದಿಢೀರ್ ಮದುವೆ ಆಗಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ ನಟಿ ಪ್ರಣೀತಾ, ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ತಮ್ಮ ಮಗುವಿನ ಜೊತೆ ಫೋಟೋಶೂಟ್ ಮಾಡಿಸಿ, ಸಂಭ್ರಮಿಸಿದ್ದರು. ಇದೀಗ ಪ್ರಣೀತಾ ಅವರು ತಮ್ಮ ಕುಟುಂಬದೊಂದಿಗೆ ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್ನಲ್ಲಿ ಬೀಡು ಬಿಟ್ಟಿದ್ದು, ಪ್ರಕೃತಿಯ ಮಡಿಲಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಮಾಲ್ಡೀವ್ಸ್ಗೆ ಹೋಗುವ ಸೆಲೆಬ್ರಿಟಿಗಳಂತೂ ತಮ್ಮ ಇನ್ಸ್ಟಾಂಗ್ರಾಂನಲ್ಲಿ ಏನಾದರೂ ಒಂದು ಅಪ್ಡೇಟ್ ಕೊಡಲೇಬೇಕು. ಇಲ್ಲದಿದ್ದರೆ, ಅವರ ಪ್ರವಾಸ ಪೂರ್ಣವಾಗುವುದೇ ಇಲ್ಲ. ಪ್ರಣೀತಾ ಕೂಡ ಇದಕ್ಕೆ ಹೊರತಾಗಿಲ್ಲ. ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾಲ್ಡೀವ್ಸ್ ರೆಸಾರ್ಟ್ಸ್ನಲ್ಲಿ ತೀರ ಪ್ರದೇಶದಲ್ಲಿ ಕಳೆದ ಸುಮಧುರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮಾಲ್ಡೀವ್ಸ್ನಲ್ಲಿರುವ ರೆಸಾರ್ಟ್ಗಳು ತಮ್ಮ ಪ್ರಚಾರದ ಭಾಗವಾಗಿ ಸೆಲೆಬ್ರಿಟಿಗಳಿಗೆ ಉಚಿತ ಪ್ರವಾಸದ ವ್ಯವಸ್ಥೆ ಮಾಡುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ಸೆಲೆಬ್ರಿಟಿಗಳ ನೆಚ್ಚಿನ ತಾಣ ಇದೇ ಆಗಿದೆ. ಕರೊನಾದಿಂದ ಬಿಡುವು ಸಿಕ್ಕ ಬಳಿಕ ಬಾಲಿವುಡ್, ಟಾಲಿವುಡ್, ಕಾಲಿವುಡ್ ಮತ್ತು ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಒಂದು ಸುತ್ತು ಸುತ್ತಾಡಿ ಬಂದಿರುವುದು ವರದಿಯಾಗಿವೆ.
ನಟಿಯರಿಗಂತೂ ಮಾಲ್ಡೀವ್ಸ್ ಸ್ವರ್ಗವೇ ಸರಿ. ಕಡಲ ಕಿನಾರೆಯಲ್ಲಿ ಮೈಚಳಿ ಬಿಟ್ಟು ಮಿಂದೇಳುತ್ತಾರೆ. ಬಿಕಿನಿ ಧರಿಸಿ ಬೋಲ್ಡ್ ಅವತಾರದಲ್ಲಿ ಕ್ಯಾಮೆರಾಗೆ ಪೋಸ್ ನೀಡುತ್ತಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಾರೆ. ಅದರಂತೆ ಪ್ರಣೀತಾ ಕೂಡ ಬಿಕಿನಿ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದು, ಅನಂತ ಮತ್ತು ಅದಕ್ಕೂ ಮೀರಿದ್ದು ಎಂಬ ಅಡಿಬರಹದೊಂದಿಗೆ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಪ್ರಣೀತಾ ಪೋಸ್ಟ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಈಗಾಗಲೇ 70 ಸಾವಿರಕ್ಕೂ ಅಧಿಕ ಲೈಕ್ಸ್ಗಳು ಹರಿದುಬಂದಿವೆ. ತಾಯಿಯಾದ ಬಳಿಕ ಮತ್ತೆ ವರ್ಕೌಟ್ ಮಾಡಿರುವ ಪ್ರಣೀತಾ ತಮ್ಮ ದೇಹವನ್ನು ಮೊದಲಿನ ಲಯಕ್ಕೆ ಮರಳಿಸಿದ್ದಾರೆ. ಫಿಟ್ ಆ್ಯಂಡ್ ಫೈನ್ ಆಗಿ ಕಾಣುತ್ತಿದ್ದು, ಮತ್ತೆ ಸಿನಿಮಾ ರಂಗದ ಕಡೆ ಮುಖ ಮಾಡುವ ಲಕ್ಷಣಗಳು ಕಾಣುತ್ತಿವೆ. ಕುಟುಂಬ ಮತ್ತು ಸಿನಿಮಾ ಹೊರತಾಗಿ ಪ್ರಣೀತಾ, ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್)