ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ರಾಜಕೀಯಕ್ಕೆ ಎಂಟ್ರಿ ಕೊಡಲು ಸ್ಯಾಂಡಲ್​ವುಡ್​ ನಟಿ ತಯಾರಿ!

Pooja Ramesh
Published on

ರಾಯಚೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪಕ್ಷಗಳು ಚುನಾವಣಾ ರಣತಂತ್ರಗಳನ್ನು ರೂಪಿಸುವತ್ತ ಗಮನಹರಿಸುತ್ತಿವೆ. ಇದರ ನಡುವೆ ಸ್ಯಾಂಡಲ್​ವುಡ್​ ನಟಿ ಪೂಜಾ ರಮೇಶ್​, ಚುನಾವಣಾ ಅಖಾಡಕ್ಕೆ ಪ್ರವೇಶ ನೀಡುವ ಸುಳಿವನ್ನು ನೀಡಿದ್ದಾರೆ.

ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ರಾಯಚೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಡಲು ಮಿಸ್ ಇಂಡಿಯಾ 2021ರ ವಿಜೇತೆ ಹಾಗೂ ನಟಿ ಪೂಜಾ ರಮೇಶ್​ ತಯಾರಿ ನಡೆಸುತ್ತಿರುವ ಸುದ್ದಿ ಹೊರಬಿದ್ದಿದೆ.

ರಾಯಚೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ವತಃ ಪೂಜಾ ರಮೇಶ್​ ಘೋಷಣೆ ಮಾಡಿದ್ದಾರೆ. ಈಗಾಗಲೇ ರಾಜಕೀಯ ಪಕ್ಷಗಳಿಂದ ಆಫರ್ ಬಂದಿದೆ. ಯಾವ ಪಕ್ಷ ಎಂಬುವುದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ದಿಗ್ವಿಜಯ ನ್ಯೂಸ್​​ಗೆ ಪೂಜಾ ಹೇಳಿದ್ದಾರೆ.

ಕರಾವಳಿ ಭಾಗದಿಂದ ಬಂದು ಉತ್ತರ ಕರ್ನಾಟಕದಲ್ಲಿ ಸ್ಪರ್ಧೆ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಈಗಾಗಲೇ ರಾಯಚೂರು ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಪೂಜಾ ಗುರುತಿಸಿಕೊಂಡಿದ್ದಾರೆ. ಘಟಾನುಘಟಿ ನಾಯಕರ ನಡುವೆ ಸ್ಪರ್ಧೆಗೆ ಸಿದ್ಧವಾಗಿರುವುದಾಗಿ ದಿಗ್ವಿಜಯ ನ್ಯೂಸ್ ಜೊತೆ ಪೂಜಾ ಮಾತನಾಡಿದ್ದಾರೆ.

ಅಂದಹಾಗೆ ಪೂಜಾ ರಮೇಶ್​ ಅವರು ನಿರುದ್ಯೋಗಿ, ಪೇಪರ್ ದೋಣಿ, ಲಹರಿ, ತಾಂಡವ, ಮಹಾಕಾಳಿ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅಲ್ಲದೆ, ಕಾಮಧೇನು, ಜಾನವಿ, ಸಂಭವಾಮಿ ಯುಗೇಯುಗೇ, ಗ್ರಹಣ, ಎಲ್ಲಿ ಜಾರಿತೋ ಮನವು, ಪಾಂಡು ರಂಗ ವಿಠ್ಠಲ, ಪಾರ್ವತಿ, ಎಸೆಸೆಲ್ಸಿ ನನ್ ಮಕ್ಕಳು, ಪರಮೇಶ್ವರ, ಅಶ್ವಿನಿ ನಕ್ಷತ್ರ ಧಾರಾವಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net