ಎಲೆಕ್ಟ್ರಿಕ್​ ಸ್ಕೂಟರ್​ ಶೋರೂಮ್​ನಲ್ಲಿ ಅಗ್ನಿ ಅವಘಡ: 8 ಮಂದಿ ಸಾವು, ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿತ

Fire Accident
Published on

ಹೈದರಾಬಾದ್​: ಎಲೆಕ್ಟ್ರಿಕ್​ ಸ್ಕೂಟರ್​ ಶೋರೂಮ್​ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 8 ಮಂದಿ ದುರಂತ ಸಾವಿಗೀಡಾಗಿ, ಅನೇಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸಿಕಂದರಾಬಾದ್​ನಲ್ಲಿ ಇಂದು (ಸೆ.13) ಮುಂಜಾನೆ ನಡೆದಿದೆ.

ಸಿಕಂದರಾಬಾದ್​ನಲ್ಲಿರುವ ರುಬಿ ಎಲೆಕ್ಟ್ರಿಕ್​ ಸ್ಕೂಟರ್​ ಶೋರೂಮ್​ನ ನೆಲಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಮೊಲದಲನೇ ಮತ್ತು ಎರಡನೇ ಮಹಡಿಗೂ ಹರಡಿ, 8 ಮಂದಿಯನ್ನು ಬಲಿಪಡೆದುಕೊಂಡಿದೆ.

ಘಟನೆ ನಡೆದಂತಹ ಸಮಯದಲ್ಲಿ ಶೋರೂಮ್​ನಲ್ಲಿ ಸುಮಾರು 25 ಮಂದಿ ಇದ್ದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕ್ರೇನ್​ ಲ್ಯಾಡರ್ಸ್​ ಬಳಿಕ ಅನೇಕ ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಸ್ಥಳೀಯ ಜನರು ಕೂಡ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲು ಕೆಲವರು ಮೊದಲು ಮತ್ತು ಎರಡನೇ ಮಹಡಿಯಿಂದ ಕೆಳಗಡೆ ಜಿಗಿದಿರುವ ವಿಡಿಯೋಗಳು ಸಹ ವೈರಲ್​ ಆಗಿವೆ. ಘಟನೆಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ತೆಲಂಗಾಣ ಗೃಹ ಸಚಿವ ಮೊಹಮ್ಮದ್​ ಮೆಹ್ಮೂದ್​ ಅಲಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೆಂಕಿ ಅವಘಡಕ್ಕೆ ಕಾರಣ ಏನೆಂಬುದನ್ನು ಪತ್ತೆಹಚ್ಚಲು ತನಿಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜನರನ್ನು ಕಾಪಾಡಲು ಅಗ್ನಿಶಾಮಕ ಸಿಬ್ಬಂದಿ ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ, ದಟ್ಟ ಹೊಗೆಯಿಂದಾಗಿ ಉಸಿರಾಡಲು ಸಾಧ್ಯವಾಗದೇ ಕೆಲವರು ಮೃತಪಟ್ಟಿದ್ದಾರೆ ಎಂದು ಮೊಹಮ್ಮದ್​ ಮೆಹ್ಮೂದ್​ ಅಲಿ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net