ಆಕೆ ನನಗೆ ಹುಟ್ಟಿದ ಮಗಳಲ್ಲ: ವಿವಾದದ ಬಳಿಕ ಸಿನಿಮಾದಿಂದ ಬ್ರೇಕ್​ ಪಡೆದುಕೊಂಡ ನಟಿ ಶ್ರೀಲೀಲಾ!

Sreeleela
Published on

ಹೈದರಾಬಾದ್​: ಕೆಲವೇ ವರ್ಷಗಳ ಹಿಂದಷ್ಟೇ ಚಿತ್ರರಂಗಕ್ಕೆ ಪ್ರವೇಶ ನೀಡಿ ಮೊದಲ ಚಿತ್ರದಲ್ಲೇ ಕನ್ನಡಿಗರ ಮನಗೆದ್ದಿರುವ ನಟಿ ಶ್ರೀಲೀಲಾ, ತಿಂಗಳ ಹಿಂದಷ್ಟೇ ಬಿಡುಗಡೆಯಾದ ಪೆಳ್ಳಿಸಂದ ಡಿ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು. ಆದರೆ, ಮೊದಲ ಚಿತ್ರದಲ್ಲೇ ವೈಯಕ್ತಿಕ ವಿಚಾರಗಳಿಂದ ಶ್ರೀಲೀಲಾ ವಿವಾದಕ್ಕೆ ಗುರಿಯಾಗಿದ್ದರು. ಇದೀಗ ಚಿತ್ರರಂಗದಿಂದ ಕೊಂಚ ಬಿಡುವು ಮಾಡಿಕೊಂಡಿರುವ ಶ್ರೀಲೀಲಾ ಇದೀಗ ಬೇರೆ ಕಡೆ ಗಮನ ಹರಿಸಿದ್ದಾರೆ.

ಪೆಳ್ಳಿಸಂದ ಡಿ ಚಿತ್ರ ಸಾಧಾರಣ ಗೆಲುವು ಸಾಧಿಸಿದರೂ ಕೂಡ ಶ್ರೀಲೀಲಾರ ಅವರ ಬ್ಯೂಟಿ ಮತ್ತು ಡ್ಯಾನ್ಸ್​ಗೆ ತೆಲುಗು ಚಿತ್ರರಂಗದ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾ ಬಿಡುಗಡೆ ಬೆನ್ನಲ್ಲೇ ವಿವಾದವೊಂದಕ್ಕೆ ಗುರಿಯಾಗಿದ್ದರು. ಶ್ರೀಲೀಲಾ ತೆಲುಗಿನ ಖ್ಯಾತ ಉದ್ಯಮಿ ಸೂರಪನೇನಿ ಸುಭಾಕರ ರಾವ್​ ಅವರ ಮಗಳು ಎಂಬ ವಿಚಾರ ಬೆಳಕಿಗೆ ಬಂದಿತ್ತು. ಆದರೆ, ಅದನ್ನು ನಿರಾಕರಿಸಿದ್ದ ಸುಭಾಕರ ರಾವ್​ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಿದ್ದರು. ಶ್ರೀಲೀಲಾ ನನ್ನ ಮಗಳಲ್ಲ. ನನ್ನ ಪತ್ನಿಯ ಜತೆ ಡಿವೋರ್ಸ್​ ಆದ ಬಳಿಕ ಆಕೆ ಶ್ರೀಲೀಲಾಗೆ ಜನ್ಮ ನೀಡಿದ್ದಾಳೆ. ಡಿವೋರ್ಸ್​ ಕೇಸ್​ ಇನ್ನು ಕೋರ್ಟಿನಲ್ಲಿ ಬಾಕಿ ಇದೆ. ನಾನು ಅವಳ ತಂದೆಯಲ್ಲ. ಶ್ರೀಲೀಲಾ ಮಾಧ್ಯಮಗಳ ಸಂದರ್ಶನದಲ್ಲಿ ನನ್ನ ಹೆಸರನ್ನು ಬಳಸುತ್ತಿದ್ದಾರೆ. ನನ್ನ ಆಸ್ತಿಯಲ್ಲಿ ಪಾಲು ಕೇಳಲೆಂದೆ ನನ್ನ ಹೆಸರು ಉಲ್ಲೇಖಿಸುತ್ತಿದ್ದಾರೆಂದು ಆರೋಪ ಮಾಡಿದ್ದರು.

ಪೆಳ್ಳಿಸಂದ ಡಿ ಚಿತ್ರದ ಬಳಿಕ ಶ್ರೀಲೀಲಾ ಮತ್ತೆ ಎಲ್ಲೂ ಸುದ್ದಿಯಾಗಿಲ್ಲ. ಇದೀಗ ಬಂದಿರುವ ಮಾಹಿತಿ ಪ್ರಕಾರ ಚಿತ್ರರಂಗದಿಂದ ಶ್ರೀಲೀಲಾ ಕೊಂಚ ಬಿಡುವು ಪಡೆದುಕೊಂಡಿದ್ದಾರೆ. ಸಾಕಷ್ಟು ಆಫರ್​ಗಳು ಬರುತ್ತಿದ್ದ ಆ ಬಗ್ಗೆ ಗಮನಹರಿಸದೇ ತಮ್ಮ ಶಿಕ್ಷಣದ ಬಗ್ಗೆ ಗಮನ ಹರಿಸಿದ್ದಾರೆ. ಎಂಬಿಬಿಎಸ್​ ಅಂತಿಮ ವರ್ಷದ ಪರೀಕ್ಷೆಗೆ ಶ್ರೀಲೀಲಾ ತಯಾರಾಗುತ್ತಿದ್ದಾರೆಂದು ತಿಳಿದುಬಂದಿದೆ. ಮುಂಬೈ ಮೂಲದ ಶ್ರೀಲೀಲಾ ಸದ್ಯ ಪರೀಕ್ಷೆಗಾಗಿ ಮುಂಬೈನಲ್ಲೇ ಉಳಿದಿದ್ದಾರೆಂದು ಹೇಳಲಾಗಿದೆ.

ತನ್ನ ಚೊಚ್ಚಲ ತೆಲುಗು ಚಿತ್ರ ಬಿಡುಗಡೆಯಾದ ತಕ್ಷಣ, ಸಿನಿಮಾ ಪ್ರಚಾರವನ್ನು ಮುಗಿಸಿದ ಶ್ರೀಲೀಲಾ ಪರೀಕ್ಷೆಗೆ ತಯಾರಿ ನಡೆಸಲು ಮುಂಬೈ ನಗರಕ್ಕೆ ತೆರಳಿದರು. ಇನ್ನು ಕೆಲವೇ ದಿನಗಳಲ್ಲಿ ಪರೀಕ್ಷೆ ಮುಗಿಸಿ ಮತ್ತೆ ಕೆಲಸಕ್ಕೆ ಮರಳಲಿದ್ದಾರೆಂದು ಸಿನಿಮಾ ಮೂಲಗಳು ತಿಳಿಸಿವೆ.

ಕೆಲವು ಮೂಲಗಳ ಪ್ರಕಾರ ಶ್ರೀ ಲೀಲಾ ಈಗಾಗಲೇ ತಮ್ಮ ಮುಂದಿನ ಚಿತ್ರಕ್ಕೆ ಸ್ಟಾರ್​ ನಟನ ಜತೆ ನಟಿಸಲಿದ್ದಾರೆ. ಅಲ್ಲದೆ, ಒಂದೆರಡು ದೊಡ್ಡ ನಿರ್ಮಾಣ ಸಂಸ್ಥೆಗಳು ಕೂಡ ಯುವ ನಾಯಕಿಯೊಂದಿಗೆ ಮಾತುಕತೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.

ಸಿನಿಮಾ ವಿಚಾರಕ್ಕೆ ಬಂದರೆ, ನಿರ್ದೇಶಕ ಎ.ಪಿ. ಅರ್ಜುನ್​ ಅವರ ಕಿಸ್ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಶ್ರೀಲೀಲಾ, ಮೊದಲ ಚಿತ್ರದಲ್ಲೇ ಕನ್ನಡಿಗರ ಮನಸ್ಸು ಗೆದ್ದರು. ಬಳಿಕ ಶ್ರೀ ಮುರುಳಿ ಜತೆ ಭರಾಟೆ ಚಿತ್ರದಲ್ಲಿ ನಟಿಸಿದರು. ನಿನ್ನೆ ತೆರೆಕಂಡಿರೋ ಪೆಳ್ಳಿಸಂದ ಡಿ ಚಿತ್ರದ ಮೂಲಕ ಟಾಲಿವುಡ್​ಗೂ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net