

ಹೈದರಾಬಾದ್: ವಾರದ ಹಿಂದಷ್ಟೇ ಬಿಡುಗಡೆಯಾದ ನಟ ಸಿಂಬು ಅಭಿನಯದ "ಮಾನಾಡು" ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿರುವ ಹಿರಿಯ ನಟ ಹಾಗೂ ನಿರ್ದೇಶಕ ಎಸ್.ಜೆ. ಸೂರ್ಯ ಸಾಕಷ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ. ತಮ್ಮ ಖಡಕ್ ಡೈಲಾಗ್ ಡಿಲಿವರಿಯಿಂದಲೇ ಸಿನಿ ರಸಿಕರನ್ನು ತಮ್ಮೆಡೆಗೆ ಸೆಳೆದುಕೊಂಡಿದ್ದಾರೆ.
ಒಂದೆಡೆ ಸಿನಿಮಾ ಯಶಸ್ವಿ ಪಥದಲ್ಲಿ ಸಾಗುತ್ತಿದ್ದರೆ, ಇನ್ನೊಂದೆಡೆ ನಟ ಎಸ್.ಜೆ. ಸೂರ್ಯ ಅವರು ನಟ ತಲಾ ಅವರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆಂದು ತಿಳಿದುಬಂದಿದೆ. 1999ರಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನಗೊಂಡ ತಮ್ಮ ನಿರ್ದೇಶನ ವಾಲಿ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ತಯಾರಿ ನಡೆದಿದೆ. ಆದರೆ, ಇದಕ್ಕೆ ಸೂರ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರು ಅಜಿತ್ ಜತೆ ಮೂರು ಚಿತ್ರಗಳ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಅದರಲ್ಲಿ ಈಗಾಗಲೇ ನೇರ್ಕೊಂಡ ಪಾರವೈ ಮತ್ತು ಬಿಡುಗಡೆಯಾಗಬೇಕಿರುವ ವಾಲಿಮೈ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೆ, ಅಜಿತ್ ಅವರ 61ನೇ ಚಿತ್ರವನ್ನು ನಿರ್ಮಿಸಲಿದ್ದಾರೆ. ವಾಲಿ ಚಿತ್ರದ ರಿಮೇಕ್ ಮಾಡುವ ಯೋಜನೆಯನ್ನು ಬೋನಿ ಕಪೂರ್ ಹಾಕಿಕೊಂಡಿದ್ದಾರೆ.
ಆದರೆ, ರಿಮೇಕ್ ವಿರುದ್ಧ ಸೂರ್ಯ ಮದ್ರಾಸ್ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು. ವಾಲಿ ಚಿತ್ರದ ಡಬ್ಬಿಂಗ್ ರೈಟ್ಸ್ ನಿರ್ಮಾಪಕರ ಬಳಿ ಇರುವಾಗ ಚಿತ್ರದ ಬರಹಗಾರ, ನಿರ್ದೇಶಕ ಚಿತ್ರದ ರಿಮೇಕ್ ಹಕ್ಕನ್ನು ಹೊಂದಿರುತ್ತಾರೆ ಎಂದು ವಾದಿಸಿದ್ದರು. ಆದರೆ, ಕೋರ್ಟ್ ಸೂರ್ಯ ಅವರ ವಾದವನ್ನು ತಿರಸ್ಕರಿಸಿ, ನಿರ್ಮಾಪಕರ ಪರವಾಗಿ ತೀರ್ಪು ನೀಡಿದೆ.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ವಾಲಿಮೈ ಚಿತ್ರದ ನಿರ್ಮಾಪಕ ಬೋನಿ ಕಪೂರ್ ನಿರ್ಮಿಸಲು ಹೊರಟಿರುವ ವಾಲಿ ಚಿತ್ರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸೂರ್ಯ ನಿರ್ಧರಿಸಿದ್ದಾರೆ. 1999ರಲ್ಲಿ ತೆರೆಕಂಡ ವಾಲಿ ಚಲನಚಿತ್ರವು ಸಾಮಾನ್ಯ ನಟನಾಗಿದ್ದ ಅಜಿತ್ ಅವರ ವೃತ್ತಿಜೀವನವನ್ನು ಬದಲಿಸಿತು. ಕನ್ನಡದಲ್ಲಿಯೂ ಈ ಚಿತ್ರ ಅದೇ ಹೆಸರಿನಿಂದ ಬಿಡುಗಡೆಯಾಗಿದ್ದು, ಕಿಚ್ಚ ಸುದೀಪ್ ನಟನೆಯು ಕೂಡ ಎಲ್ಲರ ಗಮನ ಸೆಳೆಯಿತು. (ಏಜೆನ್ಸೀಸ್)