

ಹೈದರಾಬಾದ್: ಆ್ಯಂಕರ್ ಮಾಡಿದ ಯಡವಟ್ಟಿಗೆ ಅಲ್ಲು ಅರ್ಜುನ್ ನಟನೆಯ "ಪುಷ್ಪ" ಸಿನಿಮಾ ತಂಡ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಉದಯ್ ಭಾನು ಬಹುತೇಕ ಮರೆತು ಹೋಗಿರುವ ಆ್ಯಂಕರ್. ಅವರು ಇತ್ತೀಚೆಗೆ ಸಿನಿಮಾ ಈವೆಂಟ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತಿರುಪತಿಯಲ್ಲಿ ನಡೆದ ಪುಷ್ಪ ಚಿತ್ರದ ಸಕ್ಸಸ್ ಈವೆಂಟ್ನಲ್ಲಿ ಉದಯ್ ಭಾನು ಆ್ಯಂಕರ್ ಆಗಿದ್ದರು. ತುಂಬಾ ದಿನಗಳ ನಂತರ ವೇದಿಕೆ ಹತ್ತಿದ ಖುಷಿಯಲ್ಲಿ ಏನೇನೋ ಮಾತನಾಡಿ ಪುಷ್ಪ ತಂಡವನ್ನು ಟ್ರೋಲ್ ದಾಳಕ್ಕೆ ನೂಕಿದ್ದಾರೆ.
ಪುಷ್ಪ ತಂಡ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ 2003 ಕೋಟಿ ರೂಪಾಯಿ ಸಂಗ್ರಹ ಮಾಡಿದೆ ಎಂದು ವೇದಿಕೆ ಮೇಲೆಯೇ ಉದಯ್ ಭಾನು ಘೋಷಣೆ ಮಾಡಿದರು. ಆದರೆ, ಪುಷ್ಪ ತಂಡ ಗಳಿಸಿರುವುದು 203 ಕೋಟಿ ರೂಪಾಯಿ. ಮಾತಿನ ಭರದಲ್ಲಿ ನಾಲಿಗೆ ತಡವರಿಸಿ 203 ಕೋಟಿ ರೂ. ಅನ್ನುವ ಬದಲು 2003 ಕೋಟಿ ರೂಪಾಯಿ ಎಂದಿದ್ದಾರೆ. ಆ್ಯಂಕರ್ ಮಾಡಿದ ಯಡವಟ್ಟಿಗೆ ಬೇರೆ ನಟರ ಅಭಿಮಾನಿಗಳು ಇದೀಗ ಅಲ್ಲು ಅರ್ಜುನ್ ಅವರನ್ನು ಗೇಲಿ ಮಾಡತೊಡಗಿದ್ದಾರೆ.
ನಕಲಿ ಹಣ ಸಂಗ್ರಹದಲ್ಲೇ ಇದು ಹೊಸ ಗರಿಷ್ಠ ಮೊತ್ತ ಎಂದು ನೆಟ್ಟಿಗರು ಚಿತ್ರತಂಡದ ಕಾಲೆಳೆಯುತ್ತಿದ್ದಾರೆ. ಆ್ಯಂಕರ್ ಘೋಷಣೆ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಚ್ಚು ರೀಟ್ವೀಟ್ ಮತ್ತು ಲೈಕ್ಸ್ಗಳು ಹರಿದುಬರುತ್ತಿರುವುದು ಸಿನಿಮಾ ತಂಡಕ್ಕೆ ಇರುಸು-ಮುರುಸು ತರಿಸಿದೆ.
ಇದೆಲ್ಲದರ ನಡುವೆಯೂ ಪುಷ್ಪ ತಂಡ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಚಾರದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ಲಾನ್ ಮಾಡಿದೆ. ಆರ್ಆರ್ಆರ್ ಚಿತ್ರ ಬಿಡುಗಡೆಯವರೆಗಾದ್ರೂ ಒಳ್ಳೆಯ ಹಣ ಸಂಗ್ರಹ ಮಾಡಲು ಚಿತ್ರತಂಡ ಅಬ್ಬರ ಪ್ರಚಾರ ಮಾಡಲು ಯತ್ನಿಸುತ್ತಿದೆ. (ಏಜೆನ್ಸೀಸ್)