50 ಕೋಟಿ ರೂ. ದೋಚಿದ ಸೆಕೆಂಡ್​ ಹ್ಯಾಂಡ್​ ಐಟಂ ಎಂದ ಟ್ವಿಟ್ಟಿಗನಿಗೆ ಸಮಂತಾ​ ಕೊಟ್ಟ ಉತ್ತರ ಹೀಗಿತ್ತು...

Samantha
Published on

ಹೈದರಾಬಾದ್​: ಅಕ್ಟೋಬರ್​ 2ರಂದು ಸಮಂತಾ ಮತ್ತು ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್​ ಘೋಷಣೆ ಮಾಡಿದ ದಿನದಿಂದಲೂ ಅವರ ಡಿವೋರ್ಸ್​ ವಿಚಾರ ಒಂದಲ್ಲ ಒಂದು ಕಾರಣಕ್ಕೆ ಇನ್ನು ಚರ್ಚೆಯಾಗುತ್ತಲೇ ಇದೆ. ಸಮಂತಾರನ್ನು ಗುರಿಯಾಗಿರಿಸಿಕೊಂಡು ಟ್ರೋಲ್​ ಮಾಡುತ್ತಿರುವುದು ಕೂಡ ಕೊನೆಯಾಗುವಂತೆ ಕಾಣುತ್ತಿಲ್ಲ. ಇಷ್ಟು ದಿನ ಸಾಕಷ್ಟು ಟ್ರೋಲ್​ಗಳನ್ನು ನಿರ್ಲಕ್ಷಿಸಿದ್ದ ಸಮಂತಾ, ಇದೀಗ ಗಂಭೀರ ಆರೋಪಯುಕ್ತ ಟ್ರೋಲ್​ ಒಂದಕ್ಕೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಕಮರಲಿ ದುಕಂದರ್​ ಹೆಸರಿನ ಟ್ವಿಟ್ಟಿಗನೊಬ್ಬ ಸಮಂತಾರನ್ನು ವಿಚ್ಛೇದಿತ ಹಾಳಾದ ಸೆಕೆಂಡ್​ ಹ್ಯಾಂಡ್​ ಐಟಂ ಎಂದು ಕರೆದಿರುವುದಲ್ಲದೇ, ಓರ್ವ ಸಭ್ಯ ವ್ಯಕ್ತಿಯಿಂದ 50 ಕೋಟಿ ರೂ. ತೆರಿಗೆ ಮುಕ್ತ ಹಣವನ್ನು ದೋಚಿದ್ದಾರೆಂದು ಬಹಳ ಕಠೋರವಾದ ಆರೋಪವನ್ನು ಮಾಡಿದ್ದಾನೆ. ಇದಕ್ಕೆ ನಯವಾಗಿಯೇ ಪ್ರತಿಕ್ರಿಯೆ ನೀಡಿರುವ ನಟಿ ಸಮಂತಾ, ಕಮರಲಿ ದುಕಂದರ್​, ದೇವರು ನಿಮ್ಮ ಆತ್ಮವನ್ನು ಆಶೀರ್ವದಿಸಲಿ ಎಂದಿದ್ದಾರೆ.

ಅ.2ರಂದು ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್​ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶಗಳನ್ನು ಪೋಸ್ಟ್​ ಮಾಡುವ ಮೂಲಕ ಡಿವೋರ್ಸ್​ ಅನ್ನು ಅಧಿಕೃತವಾಗಿ ಘೋಷಣೆ ಮಾಡಿದರು. “ಸಾಕಷ್ಟು ಸಮಾಲೋಚನೆಯ ಬಳಿಕವು ನಾವಿಬ್ಬರೂ ಗಂಡ-ಹೆಂಡತಿಯ ಸಂಬಂಧ ಬಿಟ್ಟು ಬೇರೆ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ದಶಕದ ಮಟ್ಟಿಗಿನ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ಮುಂದೆಯೂ ನಮ್ಮಿಬ್ಬರ ನಡುವೆ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ” ಎಂದು ಸಮಂತಾ ಮತ್ತು ನಾಗಚೈತನ್ಯ ಬರೆದಿದ್ದಾರೆ. ಜೊತೆಗೆ, ತಮ್ಮ ಈ ಕಷ್ಟಕಾಲದಲ್ಲಿ ತಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ತಾವು ಮೂವ್​ ಆನ್​ ಆಗಲು ಅಗತ್ಯವಾದ ಪ್ರೈವೆಸಿ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.

ಡಿವೋರ್ಸ್​ ಆದ ಬಳಿಕವೂ ಸಮಂತಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ಟ್ರೋಲ್​ ಹರಿದಾಡುತ್ತಿವೆ. ಸಮಂತಾರಿಗೆ ಅಕ್ರಮ ಸಂಬಂಧ ಇದೆ. ಅವರು ಗರ್ಭಪಾತ ಮಾಡಿಸಿಕೊಂಡಿದ್ದಾರೆ. ಸಮಂತಾರ ಈ ನಡೆ ನಾಗಚೈತನ್ಯ ಕುಟುಂಬದ ಇರುಸು-ಮುರುಸಿಗೆ ಕಾರಣವಾಗಿದ್ದು, ಡಿವೋರ್ಸ್​ನೊಂದಿಗೆ ಅಂತ್ಯವಾಗಿದೆ ಎಂದು ವದಂತಿಗಳನ್ನು ಹಬ್ಬಿಸಿದ್ದರು. ಇದರ ವಿರುದ್ಧ ಸಮಂತಾ ಕೊರ್ಟ್​ ಮೆಟ್ಟಿಲು ಕೂಡ ಹೇರಿದ್ದರು. ಬಳಿಕ ತಮ್ಮ ವಿರುದ್ಧ ಆಕ್ಷೇಪಾರ್ಹ ಪೋಸ್ಟ್​ಗಳನ್ನು ಮಾಡದಂತೆ ತಡೆಯಾಜ್ಞೆ ಸಹ ತಂದಿದ್ದಾರೆ. ಆದರೂ ಸಹ ಅವರ ವಿರುದ್ಧದ ಟ್ರೋಲ್​ ಮಾತ್ರ ಇನ್ನು ನಿಂತಿಲ್ಲ. ಕೆಲವೊಂದು ಟ್ರೋಲ್​ಗಳನ್ನು ನಿರ್ಲಕ್ಷಿಸುವ ಸಮಂತಾ, ತಮ್ಮ ಮನಸ್ಸಿಗೆ ಚುಚ್ಚುವಂತಹ ಟ್ರೋಲ್​ಗಳಿಗೆ ಸರಿಯಾಗಿಯೇ ತಿರುಗೇಟು ನೀಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net