ಹಿಜಾಬ್​ ವಿವಾದ ಕುರಿತು ದಂಗಲ್​ ಹುಡುಗಿ ಜೈರಾ ವಾಸಿಮ್​ ಹೇಳಿದ್ದು ಹೀಗೆ...

Zaira
Published on

ನವದೆಹಲಿ: ಕರ್ನಾಟಕದಲ್ಲಿ ಮುಂದುವರಿದಿರುವ ಹಿಜಾಬ್​ ವಿವಾದ ಕುರಿತು ರಾಜಕೀಯ ನಾಯಕರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಆ ಸಾಲಿಗೆ ಆಮೀರ್​ ಖಾನ್​ ನಟನೆಯ ಸೂಪರ್​ ಹಿಟ್​ "ದಂಗಲ್​" ಸಿನಿಮಾದಲ್ಲಿ ನಟಿಸಿದ್ದ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಜೈರಾ ವಾಸಿಮ್​ ಕೂಡ ಸೇರಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್​ ಮಾಡಿರುವ ಜೈರಾ, ಕರ್ನಾಟಕದ ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್​ ಬ್ಯಾನ್​ ಮಾಡಿರುವುದನ್ನು ಖಂಡಿಸಿದ್ದಾರೆ. ಹಿಜಾಬ್​ ಆಯ್ಕೆಯಲ್ಲ, ಅದು ಇಸ್ಲಾಂನ ಒಂದು ಬಾಧ್ಯತೆ ಎಂದು ಹೇಳಿದ್ದಾರೆ. ನಾನು ಕೃತಜ್ಞತೆ ಮತ್ತು ನಮ್ರತೆಯಿಂದ ಹಿಜಾಬ್ ಧರಿಸಿರುವ ಓರ್ವ ಮಹಿಳೆಯಾಗಿ, ಕೇವಲ ಧಾರ್ಮಿಕ ಬದ್ಧತೆಯನ್ನು ನಿರ್ವಹಿಸುವ ಮಹಿಳೆಯರನ್ನು ಬೀದಿಯಲ್ಲಿ ನಿಲ್ಲಿಸಿ ಕಿರುಕುಳ ನೀಡುತ್ತಿರುವ ಈ ಸಂಪೂರ್ಣ ವ್ಯವಸ್ಥೆಯನ್ನು ವಿರೋಧಿಸುತ್ತೇನೆ ಎಂದಿದ್ದಾರೆ.

ಹಿಜಾಬ್ ಒಂದು ಆಯ್ಕೆಯಷ್ಟೇ ಎಂಬ ಕಲ್ಪನೆಯೇ ಅಪ್ರಬುದ್ಧವಾಗಿದೆ. ಹಿಜಾಬ್​ ಒಂದು ಆಯ್ಕೆಯಲ್ಲ ಬದಲಾಗಿ ಇಸ್ಲಾಂನ ಒಂದು ಕರ್ತವ್ಯ. ಓರ್ವ ಮಹಿಳೆ ಹಿಜಾಬ್​ ಧರಿಸಿದ್ದಾಳೆ ಅಂದರೆ ಆಕೆ ಪ್ರೀತಿಸುವ ಮತ್ತು ತನ್ನನ್ನು ಅರ್ಪಿಸಿಕೊಂಡ ದೇವರ ಕರ್ತವ್ಯವನ್ನು ಖುಷಿಯಿಂದಲೇ ನೆರವೇರಿಸುತ್ತಿರುತ್ತಾಳೆ ಎಂದರ್ಥ. ಆದರೆ, ಹಿಜಾಬ್​ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಈ ರೀತಿ ಕಿರುಕುಳ ನೀಡುತ್ತಿರುವುದನ್ನು ಓರ್ವ ಹಿಜಾಬ್​ ಧರಿಸುವ ಮಹಿಳೆಯಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಮುಸ್ಲಿಂ ಮಹಿಳೆಯರನ್ನು ಶಿಕ್ಷಣ ಮತ್ತು ಹಿಜಾಬ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿ ಅಂತಾ ಹೇಳುವುದು ಅನ್ಯಾಯವಾಗಿದೆ. ಇದೊಂದು ಪಕ್ಷಪಾತದ ನಿಲುವಾಗಿದೆ. ಮಹಿಳೆಯ ಸಬಲೀಕರಣದ ಹೆಸರಿನಲ್ಲಿ ಹಿಜಾಬ್​ ಕಳಚುವಂತೆ ಮಾಡುತ್ತಿರುವುದು ದುಃಖಕರವಾಗಿದೆ ಎಂದು ಜೈರಾ ಅಸಮಾಧಾನವನ್ನು ಹೊರಹಾಕಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net