ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಮಾಜಿ ಸಿಎಂ ಬಿಎಸ್​ವೈ! ನೈಜ ಘಟನೆ ಆಧಾರಿತ ಸಿನಿಮಾದಲ್ಲಿ ನಟನೆ

BSY
Published on

ಬೆಂಗಳೂರು: ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಿದ್ದು, ತನುಜಾ ಹೆಸರಿನ ನೈಜ ಘಟನೆ ಆಧಾರಿತ ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ.

ನೀಟ್​ ಪರೀಕ್ಷೆಯನ್ನು ಬರೆಯಲಾಗದೇ ಸಂಕಷ್ಟಕ್ಕೆ ಸಿಲುಕಿದ್ದ ಯುವತಿಗೆ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಬಿಎಸ್​ವೈ ನೆರವು ನೀಡಿದ್ದರು. 350 ಕಿ.ಮೀ ದೂರದಿಂದ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಳು. ಇದು ಯುವತಿಗೆ ಯಾವ ರೀತಿಯಲ್ಲಿ ನೆರವಾಯಿತು ಎಂಬುದರ ಆಧಾರದ ಮೇಲೆ ಚಿತ್ರವನ್ನು ತೆಗೆಯಲಾಗುತ್ತಿದೆ.

ಈ ಚಿತ್ರವನ್ನು ಹರೀಶ್​ ಎಂ.ಡಿ. ಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಬಿಎಸ್​ವೈ ಈ ಚಿತ್ರದಲ್ಲಿ ಮುಖ್ಯಮಂತ್ರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಬಿಎಸ್​ವೈ ಭಾಗದ ಶೂಟಿಂಗ್​ ಪೂರ್ಣಗೊಂಡಿರುವುದಾಗಿ ಸ್ವತಃ ನಿರ್ದೇಶಕರೇ ದಿಗ್ವಿಜಯ ನ್ಯೂಸ್​ಗೆ ಮಾಹಿತಿ ನೀಡಿದ್ದಾರೆ.

ನೈಜ ಘಟನೆ ಆಧಾರಿತ ಚಿತ್ರವಾದ್ದರಿಂದ ನಟಿಸುವಂತೆ ಅವರನ್ನೇ ಕೇಳಿಕೊಂಡೆವು. ತಕ್ಷಣವೇ ಒಪ್ಪಿಕೊಂಡು ಸಂಪೂರ್ಣ ಬೆಂಬಲ ನೀಡಿದರು. ಚಿತ್ರೀಕರಣದಲ್ಲಿ ಲವಲವಿಕೆಯಿಂದಲೇ ಭಾಗವಹಿಸಿದರು. ಬಿಎಸ್​ವೈ ಅವರು ವೃತ್ತಿ ಜೀವನದಲ್ಲಿ ಸಾಕಷ್ಟು ಕ್ಯಾಮೆರಾಗಳನ್ನು ಎದುರಿಸಿರುವುದರಿಂದ ಅವರಿಗೇನು ಮುಜುಗರವಾಗಲಿಲ್ಲ. ಆದರೆ, ಕ್ಯಾಮೆರಾ ಆ್ಯಂಗಲ್​ಗಳಿಂದ ಸ್ವಲ್ಪ ಗಲಿಬಿಲಿಗೊಂಡರು ಎಂದು ನಿರ್ದೇಶಕ ಹರೀಶ್​ ಎಂ.ಡಿ. ಹಳ್ಳಿ ಹೇಳಿದರು.

ನಿನ್ನೆಯೇ (ಫೆ.19) ಬಿಎಸ್​ವೈ ಭಾಗದ ಶೂಟಿಂಗ್​ ಕಂಪ್ಲೀಟ್​ ಆಗಿದೆ. ಇದುವರೆಗೂ ಶೇ. 90 ರಷ್ಟು ಚಿತ್ರೀಕರಣ ಮುಗಿದಿದೆ. ಮುಂಬರುವ ಏಪ್ರಿಲ್​ ಅಥವಾ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಪ್ಲಾನ್​ ಮಾಡಲಾಗಿದೆ ಎಂದು ನಿರ್ದೇಶಕರು ತಿಳಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net