ನನ್ನಿಂದ ಸಹಿಸಲು ಆಗ್ತಿಲ್ಲ... ಎಸ್​ಐ ವಿರುದ್ಧ ಮತ್ತೆ ದೂರು ದಾಖಲಿಸಿದ ತಮಿಳು ನಟಿ!

Tamil-Actress-Radha
Published on

ಚೆನ್ನೈ: ಸುಂದರ ಟ್ರಾವೆಲ್ಸ್​ ಚಿತ್ರ ಖ್ಯಾತಿಯ ತಮಿಳು ನಟಿ ರಾಧಾ ಅವರು ಎರಡನೇ ಗಂಡ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್ ವಿರುದ್ಧ ಎರಡನೇ ಬಾರಿ ದೂರು ದಾಖಲಿಸಿದ್ದಾರೆ. ಕಿರುಕುಳವನ್ನು ಸಹಿಸಲು ಆಗುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ​

ಪ್ರತಿದಿನ ಗಂಡ ನೀಡುವ ಕಿರುಕುಳವನ್ನು ಸಹಿಸಲು ಆಗುತ್ತಿಲ್ಲ. ಮನಬಂದಂತೆ ಥಳಿಸುತ್ತಾರೆ ಮತ್ತು ಕೆಟ್ಟ ಪದಗಳಿಂದ ನಿಂದಿಸುತ್ತಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಟಿ ರಾಧಾ ದೂರು ನೀಡಿದ್ದಾರೆ.

ಮೂರು ತಿಂಗಳ ಹಿಂದೆಯು ರಾಧಾ ದೂರು ನೀಡಿದ್ದರು. ತನಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ಕೆಟ್ಟ ಮಾತುಗಳಿಂದ ನಿಂದಿಸುತ್ತಾರೆ ಮತ್ತು ಅನುಮಾನ ಪಡುವುದು ಹಾಗೂ ದಾಂಪತ್ಯ ನಿಷ್ಠೆಯನ್ನು ಪ್ರಶ್ನಿಸುತ್ತಾರೆಂದು ದೂರಿದ್ದರು.

ಮೂಲಗಳ ಪ್ರಕಾರ ಸಬ್​ ಇನ್ಸ್​ಪೆಕ್ಟರ್​ ರಾಧಾ ಅವರ ಎರಡನೇ ಗಂಡ ಎಂದು ತಿಳಿದುಬಂದಿದೆ. ರಾಧಾ ಅವರು ಪುರುಷ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದು ಮತ್ತು ಅವರೊಂದಿಗೆ ಓಡಾಡುವುದು ಸಬ್​ ಇನ್ಸ್​ಪೆಕ್ಟರ್​ಗೆ ಇಷ್ಟವಿರಲಿಲ್ಲ ಎಂಬ ಮಾಹಿತಿ ಇದೆ. ಈ ಕಾರಣದಿಂದಲೇ ಆತ ರಾಧಾಗೆ ಮತ್ತು ಅವರ ತಾಯಿಗೆ ಬೆದರಿಕೆ ಹಾಕಲು ಆರಂಭಿಸಿದ ಎಂದು ತಿಳಿದುಬಂದಿದೆ.

ಅಂದಹಾಗೆ ಸಬ್​ ಇನ್ಸ್​ಪೆಕ್ಟರ್​ ಹೆಸರು ವಸಂತ್​ರಾಜ್​ (40). ಕೆಲವು ತಿಂಗಳ ಹಿಂದೆ ಇಬ್ಬರು ರಹಸ್ಯವಾಗಿ ಮದುವೆ ಆಗಿದ್ದಾರೆನ್ನಲಾಗಿದೆ. ಆದರೆ, ವಸಂತ್​ರಾಜ್​ಗೆ ಈಗಾಗಲೇ ಮದುವೆ ಆಗಿ ಇಬ್ಬರು ಮಕ್ಕಳು ಸಹ ಇದ್ದಾರೆ. ರಾಧಾ ಕೂಡ ಸಿನಿಮಾ ನಿರ್ದೇಶಕರೊಬ್ಬರನ್ನು ಮದುವೆ ಆಗಿದ್ದರು. ಡಿವೋರ್ಸ್​ ಪಡೆದ ಬಳಿಕ ತನ್ನ ಮಗನೊಂದಿಗೆ ಚೆನ್ನೈನ ಸಾಲಿಗ್ರಾಮ್​ನಲ್ಲಿ ವಾಸವಿದ್ದಳು.

ಶೂಟಿಂಗ್​ ವೇಳೆ ಎಸ್​ಐ ವಸಂತ್​ರಾಜ್​ ಪರಿಚಯವಾಗಿತ್ತು. ಬಳಿಕ ಫೋನ್​ ನಂಬರ್​ ಸಹ ವಿನಿಮಯವಾಗಿತ್ತು. ಹೀಗೆ ಆಗಾಗ ಭೇಟಿ ಮಾಡುವುದು ಸಾಮಾನ್ಯವಾಗಿತ್ತು. ಕೊನೆಗೆ ಇದು ಪ್ರೀತಿಗೆ ತಿರುಗಿತ್ತು. ತಿರುವಣಮಿಯುರ್​ ಪೊಲೀಸ್​ ಠಾಣೆಯಿಂದ ರಾಧಾಗಾಗಿ ವಡಪಳನಿ ಪೊಲೀಸ್​ ಠಾಣೆಗೆ ವಸಂತ್​ರಾಜ್​ ವರ್ಗಾಯಿಸಿಕೊಂಡಿದ್ದ. ಕೆಲವು ಸಮಯಗಳವರೆಗೆ ರಾಧಾ ಮತ್ತು ವಸಂತ್​ರಾಜ್​ ಚೆನ್ನಾಗಿಯೇ ಇದ್ದರು. ಆದರೆ, ಆಕೆ ವರ್ತನೆಯಿಂದಾಗಿ ನಂತರದ ದಿನಗಳಲ್ಲಿ ವಸಂತ್​ರಾಜ್​ ಮತ್ತೆ ವಡಪಳನಿ ಠಾಣೆಯಿಂದ ಎಣ್ಣೂರು ಪೊಲೀಸ್​ ಠಾಣೆ ಮತ್ತೆ ವರ್ಗಾವಣೆ ಮಾಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಹೀಗಿರುವಾಗ ವಿವಾದಾತ್ಮಕ ಸಂಬಂಧದೊಂದಿಗೆ ರಾಧಾ ಮತ್ತೊಮ್ಮೆ ಸುದ್ದಿಯಾದರು. 2013ರ ನವೆಂಬರ್​ನಲ್ಲಿ ಉದ್ಯಮಿ ಫೈಜೂಲ್​ ವಿರುದ್ಧ ಕೇಸು ದಾಖಲಿಸಿದ್ದರು. 6 ವರ್ಷಗಳಿಂದ ಸಂಬಂಧದಲ್ಲಿದ್ದೆವು, ಇದೀಗ ಮದುವೆ ಆಗಲು ನಿರಾಕರಿಸುತ್ತಿದ್ದಾರೆಂದು ಹೇಳಿಕೆ ನೀಡಿದ್ದರು. ಅಲ್ಲದೆ, ಮದುವೆಗೆ ಒತ್ತಾಯಿಸಿದರೆ ಖಾಸಗಿ ವಿಡಿಯೋ ಸೋರಿಕೆ ಮಾಡುವ ಬೆದರಿಕೆ ಹಾಕಿದ್ದಾರೆಂದು ದೂರು ನೀಡಿದ್ದರು. ಇದಾದ ಕೆಲವೇ ವಾರಗಳನ್ನು ತನ್ನ ದೂರನ್ನು ರಾಧಾ ವಾಪಸ್ಸು ಪಡೆದುಕೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net