

ಹೈದರಾಬಾದ್: ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಸಿನಿಮಾ ನಿರ್ಮಾಣ ಕ್ಷೇತ್ರಕ್ಕೆ ಇಳಿದಿರುವುದು ನಿಮಗೆಲ್ಲ ಗೊತ್ತೇ ಇದೆ. ಧೋನಿ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಿಸಲು ಮುಂದಾಗಿರುವ ಧೋನಿ ತಮ್ಮ ನಿರ್ಮಾಣ ಸಂಸ್ಥೆಗೆ ಧೋನಿ ಎಂಟರ್ಟೈನ್ಮೆಂಟ್ ಎಂದು ಹೆಸರಿಟ್ಟಿದ್ದಾರೆ. ಇದರ ಮೂಲಕ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳನ್ನು ಧೋನಿ ನಿರ್ಮಾಣ ಮಾಡಲಿದ್ದಾರೆ.
ಧೋನಿ ನಿರ್ಮಾಣದ ಮೊದಲ ದಕ್ಷಿಣ ಭಾರತದ ಸಿನಿಮಾ ಬಗ್ಗೆ ಇದೀಗ ಆಸಕ್ತಿಕರ ಮಾಹಿತಿಯೊಂದು ಹೊರಬಿದ್ದಿದೆ. ತೆಲುಗು ಸೂಪರ್ಸ್ಟಾರ್ ಮಹೇಶ್ ಬಾಬು ಮತ್ತು ಕಾಲಿವುಡ್ ಸೂಪರ್ಸ್ಟಾರ್ ವಿಜಯ್ ಜೊತೆ ದೊಡ್ಡ ಬಜೆಟ್ನ ಸಿನಿಮಾ ಮಾಡಲು ಧೋನಿ ಮುಂದಾಗಿದ್ದಾರೆಂದು ಸಿನಿಮಾ ಮೂಲಗಳು ತಿಳಿಸಿವೆ. ಸದ್ಯಕ್ಕೆ ಹೀಗೊಂದು ಸುದ್ದಿ ಹರಿದಾಡುತ್ತಿರುವುದಾದರೂ ಈ ಬಗ್ಗೆ ಯಾವುದೇ ಅಧಿಕೃತ ಮೂಲಗಳಿಂದ ಹೇಳಿಕೆ ಬಂದಿಲ್ಲ. ಆದರೆ, ಈ ಸುದ್ದಿ ನಿಜವಾಗಲೆಂದು ಧೋನಿ, ಮಹೇಶ್ ಬಾಬು ಮತ್ತು ವಿಜಯ್ ಅವರ ಅಭಿಮಾನಿಗಳು ಬಯಸುತ್ತಿದ್ದಾರೆ.
ಮಹೇಶ್ ಬಾಬು ಮತ್ತು ವಿಜಯ್ಗೆ ಅವರವರ ರಾಜ್ಯದಲ್ಲಿ ಒಳ್ಳೆಯ ಅಭಿಮಾನಿ ಬಳಗವಿದೆ. ಒಂದು ವೇಳೆ ಇಬ್ಬರು ಒಂದೇ ಚಿತ್ರದಲ್ಲಿ ನಟಿಸಿದರೆ, ಬಾಕ್ಸ್ಆಫೀಸ್ ಧೂಳೀಪಟವಾಗಲಿದೆ. ಸದ್ಯ ಈ ಇಬ್ಬರು ನಾಯಕರ ಜೊತೆ ಧೋನಿ ಬ್ಯಾನರ್ ಮಾತುಕತೆ ನಡೆಸುತ್ತಿರುವುದಾಗಿ ಮಾಹಿತಿ ಇದೆ. ಎಲ್ಲವು ಖಚಿತವಾದ ಬಳಿಕ ಅಧಿಕೃತವಾಗಿ ಘೋಷಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದಾಗ್ಯೂ ಮಹೇಶ್ ಮತ್ತು ವಿಜಯ್ ಇಬ್ಬರೂ ಪ್ರಸ್ತುತ ತಮ್ಮ ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿರುವ ಕಾರಣ, ಒಂದು ವೇಳೆ ಸಿನಿಮಾ ಸೆಟ್ಟೇರಿದರೂ ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. (ಏಜೆನ್ಸೀಸ್)