

ಕೋಲ್ಕತ: ಪಶ್ಚಿಮ ಬಂಗಾಳದ ಗ್ಲಾಮರಸ್ ಲೋಕದಲ್ಲಿ ಏನಾಗುತ್ತಿದೆ ಎಂಬ ಸಂಶಯ ದಟ್ಟವಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬಂಗಾಳಿ ಯುವನಟಿ ಪಲ್ಲವಿ ದೇ ಮೃತದೇಹ ಕೋಲ್ಕತದ ಗರ್ಫಾದಲ್ಲಿರುವ ಆಕೆಯ ಫ್ಲ್ಯಾಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ನಟಿ, ರೂಪದರ್ಶಿ ಬಿದಿಶಾ ಡಿ. ಮಂಜುದಾರ್ ಶವ ಅವರ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಅದರ ಬೆನ್ನಲ್ಲೇ ಇನ್ನೋರ್ವ ಮಾಡೆಲ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲೇ ಪತ್ತೆಯಾಗಿರುವುದು ಗ್ಲಾಮರಸ್ ಲೋಕದ ನಿಗೂಢತೆ ಬಗೆಗಿನ ಚರ್ಚೆ ಹುಟ್ಟುಹಾಕಿದೆ.
ಬಂಗಾಳದ ಪ್ರಖ್ಯಾತ ಮಾಡೆಲ್ ಮಂಜುಶಾ ನಿಯೋಗಿ ಅವರ ಶವ ಕೊಲ್ಕತದ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇಂದು (ಮೇ.27) ಪತ್ತೆಯಾಗಿದೆ. ಮಂಜುಶಾ, ತಮ್ಮ ಕುಟುಂಬದ ಜತೆ ಪುತೌಲಿ ಏರಿಯಾದಲ್ಲಿ ನೆಲೆಸಿದ್ದರು. ಆಘಾತಕಾರಿ ಸಂಗತಿಯೆಂದರೆ ಎರಡು ದಿನದಲ್ಲಿ ನಡೆದ ಎರಡನೇ ಆತ್ಮಹತ್ಯೆ ಪ್ರಕರಣ ಇದಾಗಿದೆ. ಅಲ್ಲದೆ, ಕೇವಲ ಎರಡು ವಾರಗಳ ಅಂತರದಲ್ಲಿ ನಡೆದ ಮೂರನೇ ಆತ್ಮಹತ್ಯೆ ಪ್ರಕರಣವಾಗಿದೆ.
ಮೇಲ್ನೋಟಕ್ಕೆ ಮೂರು ಪ್ರಕರಣಗಳೂ ಆತ್ಮಹತ್ಯೆ ಎನ್ನಲಾಗಿದೆ. ಆದರೆ, ಗ್ಲಾಮರಸ್ ಲೋಕದವರಾಗಿರುವುದರಿಂದ ಸಾವಿನ ಬಗ್ಗೆ ತೀವ್ರ ಅನುಮಾನ ವ್ಯಕ್ತವಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿರಬಹುದು ಎಂಬ ಸಂಶಯಗಳು ಕೇಳಿಬಂದಿದ್ದು, ಸದ್ಯ ಪಶ್ಚಿಮ ಬಂಗಾಳದಲ್ಲಿ ನಟಿ, ಮಾಡೆಲ್ಗಳ ಸರಣಿ ಆತ್ಮಹತ್ಯೆ ಎಲ್ಲರನ್ನು ಬೆಚ್ಚಿಬೀಳಿಸಿರುವುದರ ಜೊತೆಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
ಮಗಳ ಸಾವಿನ ಬಗ್ಗೆ ಮಾತನಾಡಿರುವ ತಾಯಿ, ಆಪ್ತ ಸ್ನೇಹಿತೆ ಬಿದಿಶಾ ದೇ ಮಜುಮ್ದಾರ್ ಸಾವಿನ ಬಳಿಕ ಮಂಜುಶಾ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದಳು ಎಂದಿದ್ದಾರೆ. ಬಿದಿಶಾ ಮೇ 26ರಂದು ಆತ್ಮಹತ್ಯೆಯಿಂದಾಗಿ ಮೃತಪಟ್ಟಿದ್ದಾರೆ. ಮಂಜುಶಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನನ್ನ ಮಗಳು ಮಂಜುಶಾ, ಬಿದಿಶಾ ಜೊತೆ ಇರಬೇಕೆಂದು ನಿರಂತರವಾಗಿ ಹೇಳುತ್ತಿದ್ದಳು. ಯಾವಾಗಲೂ ಬಿದಿಶಾ ಬಗ್ಗೆಯೇ ಮಾತನಾಡುತ್ತಿದ್ದಳು. ಶೀಘ್ರದಲ್ಲೇ ಮಾಧ್ಯಮಗಳು ಬಿದಿಶಾಳಂತೆ ನಮ್ಮ ಮನೆಯ ಮೇಲೆಯೂ ಕೇಂದ್ರೀಕರಿಸುತ್ತವೆ ಎಂದು ಹೇಳಿದಾಗ ನಾನು ಅವಳನ್ನು ಗದರಿಸಿದೆ ಎಂದು ಮಂಜುಶಾ ತಾಯಿ ತಿಳಿಸಿದ್ದಾರೆ.
ಮಂಜುಶಾ ಅವರಿಗಿಂತ ಮೊದಲು ಬಂಗಾಳಿ ಮಾಡೆಲ್-ನಟಿ-ಬಿದಿಶಾ ಡಿ ಮಜುಮ್ದಾರ್ ಕೋಲ್ಕತದ ದಮ್ ಡಮ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. 21 ವರ್ಷದ ನಟಿ ಕಳೆದ ನಾಲ್ಕು ತಿಂಗಳಿನಿಂದ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಪೊಲೀಸರು ಮೇ 25 ರಂದು ಸಂಜೆ ನಾಗರ್‌ಬಜಾರ್ ಪ್ರದೇಶದ ಫ್ಲ್ಯಾಟ್‌ನಿಂದ ಆಕೆಯ ಶವವನ್ನು ವಶಕ್ಕೆ ಪಡೆದರು. ಈ ಪ್ರಕರಣದ ತನಿಖೆಯನ್ನು ಬ್ಯಾರಕ್‌ಪುರ ಪೊಲೀಸರು ಈಗಾಗಲೇ ಆರಂಭಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದೆ. ಕೈಯಲ್ಲಿ ಸರಿಯಾದ ಉದ್ಯೋಗ ಇಲ್ಲದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ ಎನ್ನಲಾಗಿದೆ. ಆದರೆ ಕೆಲವರ ಪ್ರಕಾರ ಬಿದಿಶಾ ಮತ್ತು ಆಕೆಯ ಸ್ನೇಹಿತನ ನಡುವೆ ಜಗಳವಾಗಿದೆ. ಇದರಿಂದಾಗಿ ಗೆಳೆಯನಿಂದ ದೂರವಾಗಿ ಖಿನ್ನತೆಯಲ್ಲಿ ಬಳಲುತ್ತಿದ್ದರು ಎನ್ನಲಾಗುತ್ತಿದೆ. ಗೆಳೆಯ ಕೂಡ ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದು, ಆಕೆಯ ಕೈಯಲ್ಲಿ ಅನೇಕ ಕೆಲಸಗಳು ಇದ್ದವು. ಉದ್ಯೋಗ ಇರಲಿಲ್ಲ ಎನ್ನುವುದು ಸುಳ್ಳು ಎಂದಿದ್ದಾರೆ. ಆಕೆಯ ಆರೋಗ್ಯ ಸರಿಯಿರಲಿಲ್ಲ. ಈ ಬಗ್ಗೆ ತನ್ನ ಬಳಿ ಹೇಳಿಕೊಳ್ಳುತ್ತಿದ್ದಳು ಎಂದು ಸ್ನೇಹಿತ ಹೇಳಿದ್ದಾನೆ. ಇವೆಲ್ಲವುಗಳ ನಡುವೆ ಆಕೆ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎಂದೂ ಹೇಳಲಾಗುತ್ತಿದೆ. ಡೆತ್ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡೆತ್ನೋಟ್ನಲ್ಲಿ ಇನ್ನು ಏನೇನಿದೆ ಎನ್ನುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದೇಹವನ್ನು ಕಳುಹಿಸಲಾಗಿದೆ.
ಇನ್ನು ಬಂಗಾಳಿ ಯುವನಟಿ ಪಲ್ಲವಿ ದೇ ಮೃತದೇಹ ಕೋಲ್ಕತದ ಗರ್ಫಾದಲ್ಲಿರುವ ಆಕೆಯ ಫ್ಲ್ಯಾಟ್ನಲ್ಲಿ ಭಾನುವಾರ (ಮೇ.15)ದಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಪಲ್ಲವಿ ದೇ ಅವರು ಶಾಗ್ನಿಕ್ ಚಕ್ರವರ್ತಿ ಎಂಬುವರ ಜತೆ ಲಿವಿಂಗ್ ಟುಗೆದರ್ ರಿಲೇಶನ್ನಲ್ಲಿದ್ದರು. ಇಬ್ಬರು ಡೇಟಿಂಗ್ ನಡೆಸುತ್ತಿದ್ದರು ಎಂದು ಶಾಗ್ನಿಕ್ ಅವರ ತಾಯಿ ಹೇಳಿದ್ದಾರೆ. ಪಲ್ಲವಿ ಏಕೆ ಇಂತಹ ದುಡುಕಿನ ನಿರ್ಧಾರವನ್ನು ತೆಗೆದುಕೊಂಡರು ಅಥವಾ ಅವರ ಸಾವಿನಲ್ಲಿ ಏನಾದರೂ ಸಂಚು ಅಡಗಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಟನೆ ನಡೆದ ಸ್ಥಳದಿಂದ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಮತ್ತು ದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದರು. (ಏಜೆನ್ಸೀಸ್)