

ಕೋಲ್ಕತಾ: ಕೆಲ ದಿನಗಳ ಹಿಂದಷ್ಟೇ ಬಂಗಾಳಿ ಯುವನಟಿ ಪಲ್ಲವಿ ದೇ ಮೃತದೇಹ ಕೋಲ್ಕತದ ಗರ್ಫಾದಲ್ಲಿರುವ ಆಕೆಯ ಫ್ಲ್ಯಾಟ್ನಲ್ಲಿ ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದರ ರಹಸ್ಯ ಇನ್ನೂ ಅರಿಯುವ ಮುನ್ನವೇ ನಟಿ, ರೂಪದರ್ಶಿ ಬಿದಿಶಾ ಡಿ. ಮಂಜುದಾರ್ ಶವ ಅವರ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ.
ಕೋಲ್ಕತಾದ ದಮ್ ಡಮ್ನಲ್ಲಿರುವ ತಮ್ಮ ಅಪಾರ್ಟಮೆಂಟ್ನಲ್ಲಿ ಬಿದಿಶಾ ಶವವಾಗಿ ಪತ್ತೆಯಾಗಿದ್ದಾರೆ. 21 ವರ್ಷದ ಬಿದಿಶಾ ನಟಿ ಕಮ್ ಮಾಡೆಲ್. ಇವರು ನಾಲ್ಕು ತಿಂಗಳ ಹಿಂದೆಯಷ್ಟೇ ಈ ಅಪಾರ್ಟ್ಮೆಂಟ್ ಬಾಡಿಗೆಗೆ ಪಡೆದುಕೊಂಡಿದ್ದರು. ಆದರೆ ಇದೀಗ ಅವರ ಮೃತಪಟ್ಟಿದ್ದು, ಬಹಳ ಅನುಮಾನಕ್ಕೆ ಕಾರಣವಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು, ಕೈಯಲ್ಲಿ ಸರಿಯಾದ ಉದ್ಯೋಗ ಇಲ್ಲದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ ಎನ್ನಲಾಗಿದೆ. ಆದರೆ ಕೆಲವರ ಪ್ರಕಾರ ಬಿದಿಶಾ ಮತ್ತು ಆಕೆಯ ಸ್ನೇಹಿತನ ನಡುವೆ ಜಗಳವಾಗಿದೆ. ಇದರಿಂದಾಗಿ ಗೆಳೆಯನಿಂದ ದೂರವಾಗಿ ಖಿನ್ನತೆಯಲ್ಲಿ ಬಳಲುತ್ತಿದ್ದರು ಎನ್ನಲಾಗುತ್ತಿದೆ. ಗೆಳೆಯ ಕೂಡ ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದು, ಆಕೆಯ ಕೈಯಲ್ಲಿ ಅನೇಕ ಕೆಲಸಗಳು ಇದ್ದವು. ಉದ್ಯೋಗ ಇರಲಿಲ್ಲ ಎನ್ನುವುದು ಸುಳ್ಳು ಎಂದಿದ್ದಾರೆ. ಆಕೆಯ ಆರೋಗ್ಯ ಸರಿಯಿರಲಿಲ್ಲ. ಈ ಬಗ್ಗೆ ತನ್ನ ಬಳಿ ಹೇಳಿಕೊಳ್ಳುತ್ತಿದ್ದಳು ಎಂದು ಸ್ನೇಹಿತ ಹೇಳಿದ್ದಾನೆ. ಇವೆಲ್ಲವುಗಳ ನಡುವೆ ಆಕೆ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎಂದೂ ಹೇಳಲಾಗುತ್ತಿದೆ. ಡೆತ್ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡೆತ್ನೋಟ್ನಲ್ಲಿ ಇನ್ನು ಏನೇನಿದೆ ಎನ್ನುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದೇಹವನ್ನು ಕಳುಹಿಸಲಾಗಿದೆ.
ಮಾಡೆಲಿಂಗ್ ಜತೆ ಹಲವು ವೆಬ್ ಸಿರೀಸ್ ಮತ್ತು ಕಿರುಚಿತ್ರಗಳಲ್ಲೂ ಬಿದಿಶಾ ನಟಿಸಿದ್ದಾರೆ. ಆನಿರ್ಬೇಡ್ ಚಟ್ಟೋಪಾಧ್ಯಾಯ ನಿರ್ದೇಶನದ ‘ಭಾರ್ ದಿ ಕ್ಲೌನ್’ ಕಿರುಚಿತ್ರದಲ್ಲಿ ಇವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಒಟ್ಟಿನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮಾಡೆಲಿಂಗ್ ಕ್ಷೇತ್ರದಲ್ಲಿ ಸಾವಿನ ಸರಣಿಯೇ ನಡೆದಿದ್ದು, ಮಾಡೆಲಿಂಗ್ ಜಗತ್ತು ನಿಗೂಢವಾಗುತ್ತಾ ಸಾಗಿದೆ.