ದಿನಾಂಕ ಅದೇ … ಬಿಡುಗಡೆಯಾಗುತ್ತಿರುವ ಚಿತ್ರ ಮಾತ್ರ ಬೇರೆ …

Pushpa-Final
Published on

ಹೈದರಾಬಾದ್​: ಕರೊನಾ ಎರಡನೇ ಅಲೆಯಿಂದಾಗಿ ಎಲ್ಲ ಭಾಷೆಯ ಚಿತ್ರರಂಗಗಳಲ್ಲೂ ಗೊಂದಲ ಏರ್ಪಟ್ಟಿದೆ. ಈ ವರ್ಷ ಕೆಲವು ದೊಡ್ಡ ಬಜೆಟ್​ನ ಮತ್ತು ಪ್ಯಾನ್​ ಇಂಡಿಯಾ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದ್ದವು. ಆದರೆ, ಇದೀಗ ಲಾಕ್​​ಡೌನ್​ ಮತ್ತು ಚಿತ್ರಪ್ರದರ್ಶನ ರದ್ದಾದ ಹಿನ್ನೆಲೆಯಲ್ಲಿ ಎಲ್ಲ ಚಿತ್ರಗಳ ಬಿಡುಗಡೆ ದಿನಾಂಕದಲ್ಲಿ ಗೊಂದಲ ಏರ್ಪಟ್ಟಿದೆ.

ಪ್ರಮುಖವಾಗಿ, ತೆಲುಗು ಚಿತ್ರರಂಗದಲ್ಲಿ ಮೂರು ಪ್ಯಾನ್​ ಇಂಡಿಯಾ ಸಿನಿಮಾಗಳು ಈ ವರ್ಷ ಬಿಡುಗಡೆಯಾಗಬೇಕಿತ್ತು. ಪ್ರಭಾಸ್​ ಅಭಿನಯದ ರಾಧೇ ಶ್ಯಾಮ್​, ಅಲ್ಲು ಅರ್ಜುನ್​ ಅಭಿನಯದ ಪುಷ್ಪಾ ಮತ್ತು ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಚಿತ್ರಗಳು ಬಿಡುಗಡೆಯಾಗಬೇಕಿತ್ತು.

ಈ ಪೈಕಿ, ಪುಷ್ಪಾ ಚಿತ್ರವು ಆಗಸ್ಟ್​ 13ಕ್ಕೆ ಬಿಡುಗಡೆಯಾಗಬೇಕಿದ್ದರೆ, ಆರ್​ಆರ್​ಆರ್​ ಚಿತ್ರವು ಅಕ್ಟೋಬರ್​ 13ಕ್ಕೆ ಬಿಡುಗಡೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಲಾಕ್​ಡೌನ್​ನಿಂದಾಗಿ ಚಿತ್ರಗಳ ಬಿಡುಗಡೆಯಲ್ಲಿ ಏರುಪೇರಾಗಿದ್ದು, ಪುಷ್ಪಾ ಚಿತ್ರವು ಅಕ್ಟೋಬರ್​ 13ಕ್ಕೆ ಬಿಡುಗಡೆಯಾದರೆ, ಆರ್​ಆರ್​ಆರ್ ಚಿತ್ರವು 2022ರ ಸಂಕ್ರಾಂತಿ ಹೊತ್ತಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ, ಪುಷ್ಪಾ ಚಿತ್ರವನ್ನು ಬಾಹುಬಲಿ ಮತ್ತು ಕೆಜಿಎಫ್​ ಚಿತ್ರಗಳ ತರಹ ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ, ಮೊದಲ ಭಾಗಕ್ಕೆ ಇನ್ನೂ ಕೆಲವು ದಿನಗಳ ಚಿತ್ರೀಕರಣ ಬಾಕಿ ಇದ್ದು, ಲಾಕ್​ಡೌನ್​ ಮುಗಿದ ಮೇಲೆ ಚಿತ್ರೀಕರಣ ಮುಗಿಸಿ ಅಕ್ಟೋಬರ್​ 13ಕ್ಕೆ ಬಿಡುಗಡೆ ಮಾಡಲಾಗುತ್ತದಂತೆ. ಇನ್ನು, ಎರಡನೆಯ ಭಾಗದ ಚಿತ್ರೀಕರಣವನ್ನು ಈ ವರ್ಷದ ಕೊನೆಯಲ್ಲಿ ಪ್ರಾರಂಭಿಸಿ, ಮುಂದಿನ ವರ್ಷದ ಕೊನೆಗೆ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡವೇನೋ ಸ್ಕೆಚ್​ ಹಾಕಿದೆ. ಯಾರಿಗೆ ಗೊತ್ತು, ಈ ಪ್ಲಾನ್​ನಲ್ಲಿ ಏನೇನು ಬದಲಾವಣೆ ಆಗುತ್ತದೆ ಎಂದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net