

ಮುಂಬೈ: ನಟಿಮಣಿಯರು ನಟನೆಯ ಮೂಲಕ ಗಮನಸೆಳೆಯುವುದರ ಜತೆಗೆ ವಿವಿಧ ಬಗೆಯ ವಿನ್ಯಾಸದ ದಿರಿಸಿನ ಮೂಲಕವೂ ಗುರುತಿಸಿಕೊಳ್ಳುತ್ತಾರೆ. ಅದರಲ್ಲೂ ಪ್ರಿಯಾಂಕಾ ಚೋಪ್ರಾ ಒಂದು ಹೆಜ್ಜೆ ಮುಂದೇ ಎಂದರೆ ಅತಿಶಯೋಕ್ತಿ ಏನಲ್ಲ. ಏಕೆಂದರೆ, ಈ ಹಿಂದೆ ಹಲವು ಸಿನಿಮೋತ್ಸವಗಳಿಗೆ ಹೋದ ಸಂದರ್ಭದಲ್ಲಿ ಅವರು ಧರಿಸಿದ ಉಡುಪಿನ ವಿಚಾರವಾಗಿ ಸಾಕಷ್ಟು ಸದ್ದು ಮಾಡಿದ್ದರು. ಇದೀಗ ಮಹಾಕಾಳಿ ಮುಖಭಾವ ಇರುವ ವಿಶೇಷ ದಿರಿಸನ್ನು ಧರಿಸಿರುವ ಫೋಟೋ ವೈರಲ್ ಆಗಿದೆ.
ಹೌದು, ಸೋಷಿಯಲ್ ಮೀಡಿಯಾದಲ್ಲಿ ಹೊಸದಾದ ಫೋಟೋವೊಂದನ್ನು ಪ್ರಿಯಾಂಕಾ ಚೋಪ್ರಾ ಶೇರ್ ಮಾಡಿದ್ದು, ಆ ಫೋಟೋದಲ್ಲಿ ಪ್ರಿಯಾಂಕಾ ಅವರ ಬೆನ್ನ ಹಿಂದೆ ಕಾಳಿಯ ಫೋಟೋ ಸಹ ಇದೆ. ಅದಕ್ಕೆ ತಕ್ಕಂತೆ ಒಡೆವೆಯ, ಹೂವಿನ ಮಾಲೆಯೂ ಫೋಟೋದಲ್ಲಿ ಕಾಣಿಸುತ್ತದೆ. ಸದ್ಯ ಈ ಫೋಟೋ ಹಲವು ವಿಚಾರಕ್ಕೆ ಚರ್ಚೆಯಲ್ಲಿದ್ದು, ಪರ ವಿರೋಧವೂ ವ್ಯಕ್ತವಾಗುತ್ತಿದೆ. ಕೆಲವು ನೆಟ್ಟಿಗರು ಇದು ಹಿಂದೂ ದೇವತೆಗೆ ಮಾಡುತ್ತಿರುವ ಅವಮಾನ ಎಂದರೆ, ಇನ್ನು ಕೆಲವು ಜನ ಭಕ್ತಿಯ ಪರಾಕಾಷ್ಟೆ ಎಂದಿದ್ದಾರೆ.