

ಮುಂಬೈ: ಕರೊನಾದಿಂದ ಸಂಕಷ್ಟಕ್ಕೆ ಒಳಗಾದವರ ಪೈಕಿ ಗಟ್ಟಿಯಾಗಿ ನಿಂತವರು ಬಾಲಿವುಡ್ ನಟ ಸೋನು ಸೂದ್. ಸಾವಿರಾರು ಜನರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿರುವ ಸೋನು ಸೂದ್, ಇದೀಗ ಇನ್ನೊಂದು ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ.
ದೇಶದ ಹಲವು ರಾಜ್ಯಗಳಲ್ಲಿ ಆಕ್ಸಿಜನ್ನ ಅಭಾವ ಎದುರಾಗಿದ್ದು, ಹಾಹಾಕಾರ ಎದ್ದಿದೆ. ಕರೊನಾಗೆ ಅಪಾರ ಹಾನಿಗೊಳಗಾದ ರಾಜ್ಯಗಳಲ್ಲಿ ಕನಿಷ್ಠ ನಾಲ್ಕು ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಸೋನು ಸೂದ್ ಯೋಜಿಸುತ್ತಿದ್ದಾರೆ.
ಈಗಾಗಲೇ, ಫ್ರಾನ್ಸ್ ದೇಶದಿಂದ ಮೊದಲ ಸ್ಥಾವರವನ್ನು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮುಂದಿನ 10-12 ದಿನಗಳಲ್ಲಿ ಭಾರತಕ್ಕೆ ಆಕ್ಸಿಜನ್ ಪ್ಲಾಂಟ್ ಬರಲಿದೆ.
ಈ ಕುರಿತು ಮಾತನಾಡಿರುವ ಸೋನು ಸೂದ್, ಆಕ್ಸಿಜನ್ ಸಿಲಿಂಡರ್‌ಗಳು ಲಭ್ಯವಿಲ್ಲದ ಕಾರಣ ಸಾಕಷ್ಟು ಜನರಿಗೆ ತೊಂದರೆಯಾಗಿದ್ದೇವೆ. ಅಭಾವವಿರುವ ಕಡೆ ನಾವು ಆಮ್ಲಜನಕ ಪೂರೈಸುವುದಕ್ಕೆ ಪ್ರಯತ್ನ ನಡೆಸುತ್ತಿದ್ದೇವೆ. ಸಿಲಿಂಡರ್ಗಳ ಜೊತೆಗೆ ಸ್ಥಾವರವನ್ನು ಇಂಪೋರ್ಟ್ ಮಾಡಿಕೊಂಡರೆ, ಆಗ ಅಭಾವ ಕಡಿಮೆಯಾಗಬಹುದು. ಏಕೆಂದರೆ, ಈ ಆಮ್ಲಜನಕ ಸ್ಥಾವರಗಳು ಇಡೀ ಆಸ್ಪತ್ರೆಗಳಿಗೆ ಸರಬರಾಜು ಮಾಡುವುದರ ಜತೆಗೆ ಸಿಲಿಂಡರ್ಗಳನ್ನು ಸಹ ತುಂಬಿಸಬಹುದು. ಹಾಗಾಗಿ, ಇದರಿಂದ ಕೋವಿಡ್ನಿಂದ ಬಳಲುತ್ತಿರುವ ಜನರಿಗೆ ಸಹಾಯವಾಗಲಿದೆ ಎಂದು ಹೇಳಿಕೊಂಡಿದ್ದಾರೆ.