

Pushpa 2 : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಹಾಗೂ ಸುಕುಮಾರ್ ನಿರ್ದೇಶದನ ಪುಷ್ಪ-2 ಸಿನಿಮಾ ಇಂದು (ಡಿ. 5) ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದೆ. ಈಗಾಗಲೇ ಸಿನಿಮಾ ನೋಡಿದ ಮಂದಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಪ್ರೀಮಿಯರ್ ಶೋಗಳನ್ನು ನೋಡಿದ ಅಭಿಮಾನಿಗಳು ಸಿನಿಮಾ ಚೆನ್ನಾಗಿದೆ ಎನ್ನುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಜಾತ್ರೆಯ ಎಪಿಸೋಡ್ ಚಿತ್ರದ ಹೈಲೈಟ್ ಎನ್ನುತ್ತಿದ್ದಾರೆ.
ಪುಷ್ಪ 2 ಚಿತ್ರ ಪುಷ್ಪ ಚಿತ್ರದ ಮುಂದುವರಿದ ಭಾಗ ಎಂಬುದು ಗೊತ್ತೇ ಇದೆ. ಸುಮಾರು ಒಂದು ವರ್ಷದ ಹಿಂದೆ ಚಿತ್ರತಂಡ ಪುಷ್ಪ ಸಿನಿಮಾದ ಟೀಸರ್ ಝಲಕ್ ಬಿಡುಗಡೆ ಮಾಡಿತ್ತು. ಮೂರು ನಿಮಿಷ, 14 ಸೆಕೆಂಡುಗಳ ಟೀಸರ್ ಅದಾಗಿತ್ತು. ಅದರಲ್ಲಿ ಪುಷ್ಪ ಪಾತ್ರಧಾರಿ ಅಲ್ಲು ಅರ್ಜುನ್ ಅವರು ತಿರುಪತಿ ಜೈಲಿನಿಂದ ಪರಾರಿಯಾಗುತ್ತಿರುವುದನ್ನು ತೋರಿಸಲಾಗಿತ್ತು. ಮೈಮೇಲೆ ಬುಲೆಟ್ ಗಾಯಗಳಿದ್ದವು.
ಪುಷ್ಪ ಅವರ ಅಭಿಮಾನಿಗಳು ಬೀದಿಗಿಳಿದು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತಿರುವುದನ್ನು ಹಾಗೂ ಪೊಲೀಸರು ಪುಷ್ಪಗಾಗಿ ತೀವ್ರ ಹುಡುಕಾಟ ನಡೆಸುತ್ತಿರುವುದನ್ನು ಟೀಸರ್ನಲ್ಲಿ ತೋರಿಸಲಾಯಿತು. ಕೊನೆಗೆ ಪುಷ್ಪ ಹುಲಿಯ ಜೊತೆಗೆ ಕಾಣಿಸಿಕೊಂಡ ದೃಶ್ಯವೂ ಇತ್ತು. ಆದರೆ, ಈ ದೃಶ್ಯಗಳು ಪುಷ್ಪ 2 ಚಿತ್ರದಲ್ಲಿಲ್ಲ. ಅಷ್ಟೇ ಅಲ್ಲದೆ, ಇತ್ತೀಚಿಗೆ ಟ್ರೇಲರ್‌ನಲ್ಲಿ, ಬನ್ವರ್ ಸಿಂಗ್ ಶೆಖಾವತ್ ಪಾತ್ರಧಾರಿ ಫಾಹದ್ ಫಾಸಿಲ್ ಕೊಳವೊಂದರಲ್ಲಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ತೋರಿಸಲಾಗಿತ್ತು. ಆದರೆ, ಆ ದೃಶ್ಯವು ಕೂಡ ಸಿನಿಮಾದಲ್ಲಿಲ್ಲ. ಹೀಗಾಗಿ ಅಭಿಮಾನಿಗಳು ಆ ದೃಶ್ಯಗಳು ಎಲ್ಲಿ ಹೋದವು ಎಂದು ಹುಡುಕಾಡುತ್ತಿದ್ದಾರೆ.
ಇನ್ನು ಪುಷ್ಪ 2 ಚಿತ್ರದ ಅವಧಿ ಈಗಾಗಲೇ ಮೂರು ಗಂಟೆಗಳಿಗಿಂತ ಹೆಚ್ಚಿದೆ. ಚಿತ್ರ ತುಂಬಾ ಉದ್ದವಾಗಿದೆ ಎಂಬ ಕಾರಣದಿಂದ ಈ ದೃಶ್ಯವನ್ನು ತೆಗೆದುಹಾಕಲಾಗಿದೆಯೇ? ಅಥವಾ ಈ ಸಿನಿಮಾದ ಕೊನೆಯಲ್ಲಿ ಭಾಗ 3 ಇರಲಿದೆ ಎಂಬ ಸುಳಿವು ನೀಡಿದ್ದು, ಈ ದೃಶ್ಯಗಳು ಮೂರನೇ ಭಾಗದಲ್ಲಿ ಸೇರಿಕೊಳ್ಳುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.
ಅಂದಹಾಗೆ ಪುಷ್ಪ 2: ದಿ ರೂಲ್, 2021ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್‌ನ ಬಹು ನಿರೀಕ್ಷಿತ ಸಿನಿಮಾದ ಮುಂದಿನ ಭಾಗವಾಗಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಇಂದಿನಿಂದ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. (ಏಜೆನ್ಸೀಸ್)