ಹೈದರಾಬಾದ್: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ( Pushpa 2 ) ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್ನಲ್ಲಿ ನಿನ್ನೆ (ಡಿ.04) ನಡೆದಿದೆ.
ಮೃತ ಮಹಿಳೆಯನ್ನು ಹೈದರಾಬಾದ್‌ನ ದಿಲ್‌ಸುಖ್‌ನಗರ ಮೂಲದ ರೇವತಿ (39) ಎಂದು ಗುರುತಿಸಲಾಗಿದೆ. ರೇವತಿ ತನ್ನ ಪತಿ ಭಾಸ್ಕರ್ ಮತ್ತು ಮಕ್ಕಳಾದ ತೇಜ್ (9) ಮತ್ತು ಸಾನ್ವಿಕ್ (7) ಅವರೊಂದಿಗೆ ಸಂಧ್ಯಾ ಥಿಯೇಟರ್‌ನಲ್ಲಿ ಪ್ರೀಮಿಯರ್ ಶೋ ವೀಕ್ಷಿಸಲು ಬಂದಿದ್ದರು.
ಕಾಲ್ತುಳಿತದ ವೇಳೆ ರೇವತಿ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದರು. ಈ ವೇಳೆ ಜನರು ರೇವತಿಯನ್ನು ತುಳಿದಾಡಿದ್ದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಯಿತು. ರೇವತಿ ಅವರ ಮಗ ತೇಜು ಕೂಡ ಇದೇ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರೇವತಿಯ ಪ್ರಾಣವನ್ನು ಉಳಿಸಲಾಗಲಿಲ್ಲ. ಸದ್ಯ ತೇಜ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ರೇವತಿಯ ಪತಿ ಭಾಸ್ಕರ್ ಹಾಗೂ ಮಗಳು ಸಾನ್ವಿಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರೀಮಿಯರ್ ಶೋಗೆ ಬಂದಿದ್ದ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು. ರಾತ್ರಿ 11 ಗಂಟೆಗೆ ಪುಷ್ಪ 2 ರ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಪ್ರೀಮಿಯರ್ ವೀಕ್ಷಿಸಲು ಅಲ್ಲು ಅರ್ಜುನ್ ಬರಲಿದ್ದಾರೆ ಎಂಬ ವಿಷಯ ತಿಳಿದ ಜನರು ತಂಡೋಪತಂಡವಾಗಿ ಥಿಯೇಟರ್‌ಗೆ ಆಗಮಿಸಿದ್ದರು. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ ರೇವತಿ ಸಾವಿಗೀಡಾಗಿದ್ದಾರೆ.
ಮತ್ತೊಂದೆಡೆ ಪುಷ್ಪ 2 ಸಿನಿಮಾ ಪ್ರದರ್ಶನದ ವೇಳೆ ಪರದೆಯ ಬಳಿ ಟಾರ್ಚ್‌ಗಳನ್ನು ಬೆಳಗಿಸಿದ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಊರ್ವಶಿ ಥಿಯೇಟರ್‌ನಲ್ಲಿ ನಿನ್ನೆ ರಾತ್ರಿ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ.
ಪುಷ್ಪ 2: ದಿ ರೂಲ್, 2021ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್‌ನ ಬಹು ನಿರೀಕ್ಷಿತ ಸಿನಿಮಾದ ಮುಂದಿನ ಭಾಗವಾಗಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಇಂದಿನಿಂದ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. (ಏಜೆನ್ಸೀಸ್)
ಡಾ.ಎಂ.ಲೀಲಾವತಿ ದೇಗುಲ ಲೋಕಾರ್ಪಣೆ; ಅಮ್ಮನ ಆಸೆಯಂತೆ ಚಿಕ್ಕ ರಂಗಮಂದಿರ ನಿರ್ಮಿಸಿದ ವಿನೋದ್ ರಾಜ್
ನಟನೆಗೆ ಗುಡ್ಬೈ ಹೇಳಿದರೂ 48ನೇ ವಯಸ್ಸಿನಲ್ಲಿ ನಟಿ ಮೀನಾ ಬಳಿ ಇಷ್ಟೊಂದು ಆಸ್ತಿ ಇದೆಯಾ? Actress Meena