ಕರೊನಾ ಲಸಿಕೆ ಪಡೆದ ಪುನೀತ್​ ರಾಜಕುಮಾರ್​

Puneeth Rajakumar - Final
Published on

ಬೆಂಗಳೂರು: 'ದಯವಿಟ್ಟು ನಿಮ್ಮ ಮನೆಯ ಹಿರಿಯರಿಗೆ ಲಸಿಕೆ ಕೊಡಿಸಿ' ಎಂದು 'ಯುವರತ್ನ' ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲೇ ಸಾಮಾಜಿಕ ಕಳಕಳಿ ಮೆರೆದಿದ್ದರು ಪುನೀತ್​ ರಾಜಕುಮಾರ್​. ಅಷ್ಟೇ ಅಲ್ಲ, ತಮ್ಮ ವಯೋಮಿತಿಗೆ ಲಸಿಕೆ ಕೊಡುವುದಕ್ಕೆ ಪ್ರಾರಂಭಿಸುತ್ತಿದ್ದಂತೆಯೇ, ಮೊದಲು ಲಸಿಕೆ ಪಡೆಯುವುದಾಗಿ ಅವರು ಹೇಳಿಕೊಂಡಿದ್ದರು.

ಅದರಂತೆ, ಬುಧವಾರ ಬೆಳಿಗ್ಗೆ ಪುನೀತ್​ ರಾಜಕುಮಾರ್​ ಕರೊನಾ ಲಸಿಕೆಯ ಮೊದಲ ಡೋಸ್​ ಪಡೆದಿದ್ದಾರೆ. ಲಸಿಕೆ ಪಡೆಯುತ್ತಿರುವ ಫೋಟೋ ಹಂಚಿಕೊಂಡಿರುವ ಪುನೀತ್​, 'ಇಂದು ಕರೊನಾ ಲಸಿಕೆಯ ಮೊದಲ ಡೋಸ್​ ಪಡೆದಿದ್ದೇನೆ. ನೀವು 45 ವರ್ಷದ ಮೇಲ್ಪಟ್ಟವರಾಗಿದ್ದರೆ, ದಯವಿಟ್ಟು ಲಸಿಕೆ ತೆಗೆದುಕೊಳ್ಳಿ' ಎಂದು ಪೋಸ್ಟ್​ ಹಾಕಿದ್ದಾರೆ.

ಪುನೀತ್​ ಅವರ ಈ ಪೋಸ್ಟ್​ಗೆ ಹಲವರು ಪ್ರತಿಕ್ರಿಯೆ ನೀಡಿದ್ದು, ನಿಮಗೆ 45 ವರ್ಷ ವಯಸ್ಸಾಗಿದೆ ಎಂದು ನಂಬುವುದಕ್ಕೆ ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಇನ್ನು, ಇತ್ತೀಚಿನ ದಿನಗಳಲ್ಲಿ ಜಗ್ಗೇಶ್​, ಕೆ.ಎಂ. ಚೈತನ್ಯ, ಗಿರಿಜಾ ಲೋಕೇಶ್​, ಶಿವರಾಮಣ್ಣ ಸೇರಿದಂತೆ ಚಿತ್ರರಂಗದ ಹಲವು ನಟ-ನಟಿಯರು ಕರೊನಾ ಲಸಿಕೆ ಪಡೆದಿದ್ದು, ಈಗ ಆ ಸಾಲಿಗೆ ಪುನೀತ್​ ರಾಜಕುಮಾರ್​ ಸಹ ಸೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net