

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆಜೊತೆಯಲಿ’ ಧಾರಾವಾಹಿಯಿಂದ, ನಾಯಕ ಅನಿರುದ್ಧ ಹೊರಬಂದಿದ್ದಾರೆ ಎಂಬ ಸುದ್ದಿಯೊಂದು ಶುಕ್ರವಾರ ವಿಪರೀತ ಚರ್ಚೆಯಾಗಿತ್ತು. ಅನಿರುದ್ಧ ಮತ್ತು ತಂಡದವರ ನಡುವೆ ಮನಸ್ತಾಪವಾಗಿದೆ, ಅವರನ್ನು ಧಾರಾವಾಹಿ ತಂಡದಿಂದ ಕೈಬಿಡಲಾಗಿದೆ, ಸದ್ಯದಲ್ಲೇ ಅವರ ಜಾಗಕ್ಕೆ ಮತ್ತೊಬ್ಬ ನಟ ಬರುವ ಸಾಧ್ಯತೆ ಇದೆ ಎಂಬಂತಹ ಮಾತುಗಳು ಕೇಳಿ ಬಂದಿವೆ. ಈ ಕುರಿತು ಅನಿರುದ್ಧ ಅವರನ್ನು ‘ವಿಜಯವಾಣಿ’ ಮಾತನಾಡಿಸಿದಾಗ, ತಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂಬ ಉತ್ತರ ಬರುತ್ತದೆ. ‘ನಾನು ಸಹ ಈ ವಿಷಯಗಳನ್ನು ಮಾಧ್ಯಮಗಳಿಂದ ಕೇಳುತ್ತಿದ್ದೇನೆಯೇ ಹೊರತು, ನಿರ್ದೇಶಕ ಆರೂರ್ ಜಗದೀಶ್ ಅಥವಾ ಚಾನಲ್ ಕಡೆಯಿಂದ ನನಗೆ ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಅಧಿಕೃತವಾಗಿ ಮಾಹಿತಿ ಇಲ್ಲವಾದ್ದರಿಂದ, ಮಾತನಾಡುವುದಕ್ಕೆ ಸಾಧ್ಯವಿಲ್ಲ’ ಎಂದು ಹೇಳುತ್ತಾರೆ.
ಧಾರಾವಾಹಿ ತಂಡದವರ ಜತೆಗೆ ಮನಸ್ತಾಪವೇನಾದರೂ ಇತ್ತ ಎಂಬ ಪ್ರಶ್ನೆಗೆ, ‘ಪ್ರತಿ ಮನೆಯಲ್ಲೂ ಇವೆಲ್ಲಾ ಸಾಮಾನ್ಯ. ಮನಸ್ತಾಪ ಹೇಗೆ ಸಹಜವೋ, ಪ್ರೀತಿ ಸಹ ಅಷ್ಟೇ ಸಹಜ. ಅದನ್ನು ನಾವು ಬೀದಿಗೆ ತರುವುದಿಲ್ಲ. ಏನಾಗಿದೆ ಎಂದು ನನಗೆ ಗೊತ್ತಿಲ್ಲ. ನಕಾರಾತ್ಮಕವಾದ ಮಾತುಗಳು ನಮ್ಮ ನಿರ್ದೇಶಕ ಜಗದೀಶ್ ಅಥವಾ ಚಾನಲ್ ಕಡೆಯಿಂದ ಬಂದರೆ ಅಥವಾ ನನ್ನ ಮೇಲೆ ನೇರವಾಗಿ ಆರೋಪಗಳನ್ನು ಮಾಡಿದರೆ, ಆಗ ನಾನು ಸ್ಪಷ್ಟೀಕರಣ ಕೊಡುತ್ತೇನೆ. ಪತ್ರಿಕಾಗೋಷ್ಠಿ ಕರೆದು ವಿವರವಾಗಿ ಮಾತನಾಡುತ್ತೇನೆ. ಆದರೆ, ಎಲ್ಲೋ ಒಂದು ಕಡೆ ಸುದ್ದಿ ಓದಿ ನಾನು ಪ್ರತಿಕ್ರಿಯಿಸಲಾರೆ. ಏಕೆಂದರೆ, ಅದರಿಂದ ನಾನು ಅವರ ಮೇಲೆ ತಪ್ಪು ಆರೋಪ ಹೊರಿಸಿದಂತೆ ಆಗುತ್ತದೆ. ಅವರು ಹಲವು ವರ್ಷಗಳಿಂದ ನನಗೆ ಗೊತ್ತು. ನನಗೆ ಹೇಳದೆಯೇ ಅವರು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಹೇಗೆ ಹೇಳಲಿ? ಏನಾದರೂ ಇದ್ದರೆ ಅವರು ಈ ವಿಷಯವಾಗಿ ಮಾತನಾಡುತ್ತಾರೆ. ಮಾತನಾಡಿದರೆ, ಆಗ ಸ್ಪಷ್ಟನೆ ನೀಡಲೇಬೇಕಾದ ಪರಿಸ್ಥಿತಿ ಬರುತ್ತದೆ. ಆಗ ಖಂಡಿತವಾಗಿಯೂ ನಾನು ಸ್ಪಷ್ಟನೆ ನೀಡುತ್ತೇನೆ’ ಎಂಬ ಪ್ರತಿಕ್ರಿಯೆ ಅನಿರುದ್ಧ ಅವರಿಂದ ಬರುತ್ತದೆ. ‘ಜೊತೆಜೊತೆಯಲಿ’ ಧಾರಾವಾಹಿಯಲ್ಲಿ ಅನಿರುದ್ಧ ಅವರು ಆರ್ಯವರ್ಧನ ಎಂಬ ಪಾತ್ರ ಮಾಡುತ್ತಿದ್ದು, ಈ ಧಾರಾವಾಹಿ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಜನಪ್ರಿಯವಾಗಿದೆ.
ಇದು ಮೊದಲೇನಲ್ಲ: ಇದಕ್ಕೂ ಮುನ್ನ ನಾಯಕಿ ಮೇಘಾ ಶೆಟ್ಟಿ ಹಾಗೂ ತಂಡದವರ ನಡುವೆ ಇದೇ ರೀತಿ ಮನಸ್ತಾಪ ಭುಗಿಲೆದ್ದಿದ್ದು, ಧಾರಾವಾಹಿಯಿಂದ ಮೇಘಾ ಹೊರನಡೆದರು ಎಂದು ಸುದ್ದಿಯಾಗಿತ್ತು. ಆ ನಂತರ ಮೇಘಾ ತಂಡಕ್ಕೆ ವಾಪಸ್ಸಾಗುವ ಮೂಲಕ ಈ ಪ್ರಕರಣ ಸುಖಾಂತ್ಯವಾಗಿತ್ತು.