

ಹೈದರಾಬಾದ್: ಸ್ಟ್ಯಾಂಡಪ್ ಕಾಮಿಡಿ ವೇದಿಕೆಗೇ ಬೆಂಕಿ ಇಡಲು ಹೊರಟ ಬಿಜೆಪಿ ಶಾಸಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಸ್ಟ್ಯಾಂಡಪ್ ಕಾಮಿಡಿಯನ್ ಮುನಾವರ್ ಫಾರೂಕಿ ಕಾಮಿಡಿ ಪ್ರದರ್ಶನ ನೀಡಲಿದ್ದ ವೇದಿಕೆಗೆ ಬೆಂಕಿ ಹಚ್ಚಲು ಮುಂದಾಗಿದ್ದಾಗ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತೆಲಂಗಾಣದ ಘೋಷಾಮಹಲ್ನ ಬಿಜೆಪಿ ಶಾಸಕ ರಾಜಾ ಸಿಂಗ್ ಬಂಧನಕ್ಕೆ ಒಳಗಾದ ಜನಪ್ರತಿನಿಧಿ. ಇಲ್ಲಿನ ಶಿಲ್ಪಕಲಾ ವೇದಿಕೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಮುನಾವರ್ ಫಾರೂಕಿ ಶನಿವಾರ ಕಾಮಿಡಿ ಪ್ರದರ್ಶನ ನೀಡಲಿದ್ದು, ಇಂದು ಆ ವೇದಿಕೆಗೆ ಬೆಂಕಿ ಇಡುವುದಾಗಿ ಹೇಳಿ ರಾಜಾ ಸಿಂಗ್ ಹೊರಟಿದ್ದರು. ಈ ಸಂದರ್ಭದಲ್ಲಿ ಹೈದರಾಬಾದ್ ಪೊಲೀಸರು ಶಾಸಕರನ್ನು ವಶಕ್ಕೆ ಪಡೆದಿದ್ದಾರೆ.
ಶಾಸಕರನ್ನು ವಶಕ್ಕೆ ಪಡೆಯುವಾಗ ಅವರ ಬೆಂಬಲಿಗರು ಪೊಲೀಸರಿಗೆ ಅಡ್ಡಿಪಡಿಸಿದ ಪ್ರಕರಣವೂ ನಡೆಯಿತು. ಅದಾಗ್ಯೂ ಅವರನ್ನೆಲ್ಲ ಚದುರಿಸಿದ ಪೊಲೀಸರು ಶಾಸಕರನ್ನು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ ಪೊಲೀಸರು ಮುನಾವರ್ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿ ರದ್ದುಗೊಳಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ. ಅಲ್ಲದೆ, ತಮ್ಮ ಬೆಂಬಲಿಗರು ಆನ್ಲೈನ್ನಲ್ಲಿ ಟಿಕೆಟ್ ಪಡೆದಿದ್ದು, ಕಾರ್ಯಕ್ರಮ ನಿಲ್ಲಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಕೂಡ ಹೇಳಿದ್ದಾರೆ.
ಅದಾಗ್ಯೂ ನಮ್ಮನ್ನೆಲ್ಲ ಜೈಲಿಗೆ ಹಾಕಿ ಶೋಗೆ ಅನುಕೂಲ ಮಾಡಿಕೊಟ್ಟು ಅದು ನಡೆದರೆ, ನಾವು ಆ. 22ರಂದು ಇನ್ನೊಂದು ಕಾಮಿಡಿ ಶೋ ಮಾಡುತ್ತೇವೆ. ಆಗ ಕಾನೂನು ಸುವ್ಯವಸ್ಥೆಗೆ ಭಂಗ ಬಂದರೆ ಅದಕ್ಕೆ ತೆಲಂಗಾಣದ ಡಿಜಿಪಿ ಹಾಗೂ ಗೃಹಸಚಿವರೇ ಕಾರಣರಾಗುತ್ತಾರೆ ಎಂದು ರಾಜಾ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಮುನಾವರ್ ಫಾರೂಕಿ ರಾಮ ಹಾಗೂ ಸೀತೆಯನ್ನು ಗುರಿಯಾಗಿಸಿ ಮಾತಾಡಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾನೆ. ಹಲವೆಡೆ ಆತನ ಶೋಗಳು ರದ್ದಾಗಿವೆ, ಜನರು ಹೊಡೆದು ಕಳಿಸಿದ್ದಾರೆ. ಒಂದು ದಿನ ಆತ ಜೈಲಿಗೆ ಹೋಗುತ್ತಾನೆ ಎಂಬುದಾಗಿ ಶಾಸಕ ರಾಜಾ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.