ಮಿಸ್ ವರ್ಲ್ಡ್ ಆದ್ರೆ ನಿಮ್ಮನೇಲಿ, ಇಲ್ಲಲ್ಲ ...

Priyanka Chopra - Final
Priyanka Chopra
Published on

ಎಲ್ಲಾ ನಟ-ನಟಿಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ, ಮೊದಲ ಚಿತ್ರದಲ್ಲಿ ನಟಿಸುವಾಗ, ಒಂದಲ್ಲ ಒಂದು ಎಡವಟ್ಟು ಮಾಡಿಕೊಂಡಿರುತ್ತಾರೆ. ಅದೇ ಕಾರಣಕ್ಕೆ ಹಲವರ ಕೆಂಗಣ್ಣಿಗೆ ಗುರಿಯಾಗಿರುತ್ತಾರೆ. ಆಮೇಲೆ ತಮ್ಮ ತಪ್ಪು ತಿದ್ದುಕೊಂಡು ಮೆಚ್ಚುಗೆ ಪಡೆದಿರುತ್ತಾರೆ.

ಈ ವಿಷಯದಲ್ಲಿ ಪ್ರಿಯಾಂಕಾ ಚೋಪ್ರಾ ಸಹ ಹೊರತಲ್ಲ. ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ, ಡ್ಯಾನ್ಸ್ ಮಾಡುವುದಕ್ಕೆ ಹೋಗಿ, ಅದು ಸರಿಯಾಗಿ ಬರದೆ, ನೃತ್ಯ ನಿರ್ದೇಶಕರ ಕೆಂಗಣ್ಣಿಗೆ ಗುರಿಯಾಗಿದ್ದರಂತೆ. ಈ ಬಗ್ಗೆ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಅಕ್ಷಯ್ ಕುಮಾರ್ ಅಭಿನಯದ ‘ಅಂದಾಜ್’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ. ಆ ಚಿತ್ರದ ರೊಮ್ಯಾಂಟಿಕ್ ಹಾಡೊಂದರ ಚಿತ್ರೀಕರಣ ದಕ್ಷಿಣ ಆಫ್ರಿಕಾದಲ್ಲಿ ನಡೆಯುತಿತ್ತು. ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದವರು ರಾಜು ಖಾನ್. ಅದೇನೋ ಒಂದು ದೃಶ್ಯ ಮೂವ್‌ಮೆಂಟ್ ಸರಿಯಾಗಿ ಬರುತ್ತಲೇ ಇರಲಿಲ್ಲ. 40 ಟೇಕ್‌ಗಳಾದರೂ ಸರಿ ಬರಲಿಲ್ಲ. ತಾಳ್ಮೆ ಕಳೆದುಕೊಂಡ ಅವರು ನನ್ನ ಮೇಲೆ ರೇಗಾಡಿದರು. ‘ನೀನು ಮಿಸ್ ವರ್ಲ್ಡ್ ಆದ್ರೆ ನಿಮ್ಮನೇಲಿ, ಸೆಟ್‌ನಲ್ಲಲ್ಲ. ಮಿಸ್ ವರ್ಲ್ಡ್ ಆದವರೆಲ್ಲಾ ಒಳ್ಳೆಯ ನಟಿ ಆಗಬೇಕು ಅಂತೇನಿಲ್ಲ’ ಎಂದು ಬೈದರು. ಅಷ್ಟೇ ಅಲ್ಲ, ನೃತ್ಯ ಪ್ರಾಕ್ಟೀಸ್ ಮಾಡಿಕೊಂಡು ಬಾ ಎಂದು ಸಲಹೆ ನೀಡಿದರು’ ಎಂದು ನೆನಪಿಸಿಕೊಂಡಿದ್ದಾರೆ ಪ್ರಿಯಾಂಕಾ.

ಮುಂದೇನುವಾಗ ಚಿತ್ರತಂಡಕ್ಕೆ ಬ್ರೇಕ್ ಸಿಕ್ಕಿತಂತೆ. ಕಾರಣ, ಅಕ್ಷಯ್ ಪತ್ನಿ ಟ್ವಿಂಕಲ್‌ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ, ಅಕ್ಷಯ್ ಭಾರತಕ್ಕೆ ವಾಪಸ್ಸಾದರಂತೆ. ಆ ನಂತರ ಪ್ರಿಯಾಂಕಾ, ನೃತ್ಯ ನಿರ್ದೇಶಕರ ಮಾತನ್ನು ಗಂಭೀರವಾಗಿ ತೆಗೆದುಕೊಂಡು ಕಥಕ್ ಕಲಿತಿದ್ದಾರೆ. ಪ್ರತಿ ದಿನ ಆರು ಗಂಟೆಗಳ ಕಾಲ ಅಭ್ಯಾಸ ಮಾಡಿದ್ದಾರೆ. ಒಂದಿಷ್ಟು ತಿಂಗಳುಗಳ ನಂತರ ಅವರಿಗೆ ಡ್ಯಾನ್ಸ್ ಸುಲಭವಾಯಿತಂತೆ.

ಆ ನಂತರ ಪ್ರಿಯಾಂಕಾ ಯಾವತ್ತೂ ಕುಣಿಯುವುದಕ್ಕೆ ಅಂಜಿಲ್ಲವಂತೆ. ‘ಆ ನಂತರ ಬಹಳಷ್ಟು ಚಿತ್ರಗಳಲ್ಲಿ ಡ್ಯಾನ್ಸ್ ಮಾಡಿ, ಒಳ್ಳೆಯ ಹೆಸರು ಸಂಪಾದಿಸಿದ್ದೇನೆ. ಕಥಕ್ ಕಲಿತಿದ್ದರಿಂದಲೇ ಅವೆಲ್ಲಾ ಸಾಧ್ಯವಾಯಿತು’ ಎಂದು ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net