

‘ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್’ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾಗೆ ನಟಿಸುವುದಕ್ಕೆ ಹೆಚ್ಚು ಅವಕಾಶವಿಲ್ಲದಿರಬಹದು. ಆದರೆ, ಹಾಲಿವುಡ್ನಲ್ಲಿ ಮಾತ್ರ ಅವರಿಗೆ ಕಿಂಚಿತ್ತೂ ಅವಕಾಶ ಕಡಿಮೆ ಆಗಿಲ್ಲ. ಈಗಾಗಲೇ ‘ದಿ ಸಿಟಾಡೆಲ್’ ಎಂಬ ಸರಣಿ ಮತ್ತು ‘ಟೆಕ್ಸ್್ಟ ಫಾರ್ ಯೂ’ ಎಂಬ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಇದರ ಜತೆಗೆ, ಇನ್ನೊಂದು ಹೊಸ ಚಿತ್ರವನ್ನು ಪ್ರಿಯಾಂಕಾ ಒಪ್ಪಿಕೊಂಡಿದ್ದಾರೆ.
ಪ್ರಿಯಾಂಕಾ ನಟಿಸುತ್ತಿರುವ ಹೊಸ ಚಿತ್ರದ ಹೆಸರು ‘ಸೀಕ್ರೆಟ್ ಡಾಟರ್’. ಶಿಲ್ಪಿ ಸೋಮಯ್ಯ ಗೌಡ ಬರೆದಿರುವ ‘ಸೀಕ್ರೆಟ್ ಡಾಟರ್’ ಎಂಬ ಜನಪ್ರಿಯ ಕಾದಂಬರಿಯನ್ನು ಈ ಚಿತ್ರ ಆಧರಿಸುತ್ತಿದ್ದು, ಆಂಟೋನಿ ಚೆನ್ ನಿರ್ದೇಶನ ಮಾಡುತ್ತಿದ್ದಾರೆ. ಒಂದು ಪ್ರಮುಖ ಪಾತ್ರದಲ್ಲಿ ಪ್ರಿಯಾಂಕಾ ನಟಿಸಿದರೆ, ಇನ್ನೊಂದು ಪ್ರಮುಖ ಪಾತ್ರದಲ್ಲಿ ಸಿಯೆನ್ನಾ ಮಿಲ್ಲರ್ ನಟಿಸುತ್ತಿದ್ದಾರಂತೆ. ಭಾರತದ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ಎರಡು ಪ್ರಮುಖ ಮಹಿಳಾ ಪಾತ್ರಗಳಿದ್ದು, ಕಥೆ ಅಮೆರಿಕಾ ಮತ್ತು ಭಾರತದಲ್ಲಿ ಸಾಗುತ್ತದಂತೆ.
ಒಂದು ಗಟ್ಟಿ ಪಾತ್ರ ಇರುವ ಕಾರಣಕ್ಕೇ, ಪ್ರಿಯಾಂಕಾ ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಿಯಾಂಕಾ ಈ ಚಿತ್ರದಲ್ಲಿ ಬರಿ ನಟಿಯಷ್ಟೇ ಅಲ್ಲ, ಪರ್ಪಲ್ ಪೆಬ್ಬಲ್ ಪಿಕ್ಚರ್ಸ್ ಜತೆಗೆ ಸೇರಿ ನಿರ್ವಣವನ್ನೂ ಮಾಡುತ್ತಿದ್ದಾರೆ. ಸದ್ಯ ಚಿತ್ರವು ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. -ಏಜೆನ್ಸೀಸ್