

ಮುಂಬೈ: ‘ಸೀತಾ’ ಎಂಬ ಚಿತ್ರದಲ್ಲಿ ನಟಿಸುವುದಕ್ಕೆ ಕರೀನಾ ಕಪೂರ್ 12 ಕೋಟಿ ರೂ ಸಂಭಾವನೆ ಕೇಳಿದರು ಎಂಬ ವಿಷಯ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿತ್ತು. ನಾಯಕಿಯರು ಅಷ್ಟೊಂದು ಸಂಭಾವನೆಯನ್ನು ಕೇಳುವುದರಲ್ಲಿ ತಪ್ಪೇನಿದೆ, ಸಂಭಾವನೆ ವಿಷಯದಲ್ಲಿ ನಾಯಕ ಮತ್ತು ನಾಯಕಿಯ ನಡುವೆ ತಾರತಮ್ಯವೇಕೆ ಎಂದು ತಾಪ್ಸಿ ಪನ್ನು ಪ್ರಶ್ನಿಸಿದ್ದರು. ಅಷ್ಟೇ ಅಲ್ಲ, ಒಬ್ಬ ನಟಿ ಸಂಭಾವನೆ ಹೆಚ್ಚು ಕೇಳಿದಳು ಎಂಬ ಕಾರಣಕ್ಕೆ ಆಕೆಯ ಡಿಮ್ಯಾಂಡ್‌ಗಳು ಹೆಚ್ಚಾದವು ಎಂದು ಹೇಳುವುದು ತಪ್ಪಾದೀತು ಎಂದು ತಾಪ್ಸಿ ಹೇಳಿದ್ದರು. ಈಗ ಪ್ರಿಯಾಮಣಿ ಸಹ ಕರೀನಾ ಕಪೂರ್ ಬೆಂಬಲಕ್ಕೆ ನಿಂತಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ಕರೀನಾ ಕಪೂರ್ ಅಷ್ಟೊಂದು ಸಂಭಾವನೆಯನ್ನು ಕೇಳುತ್ತಿದ್ದಾರೆ ಎಂದರೆ, ಅವರಿಗೆ ಆ ಅರ್ಹತೆ ಇದೆ. ಅಷ್ಟೇ ಅಲ್ಲ, ಅವರಿಗೆ ಆ ಮಾರುಕಟ್ಟೆ ಸಹ ಇದೆ. ಅರ್ಹತೆ ಇದೆ ಎಂದಾದಲ್ಲಿ ಅಷ್ಟು ಸಂಭಾವನೆ ಕೇಳಿದರೆ ತಪ್ಪೇನಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಇಂದು ಮಹಿಳೆಯರು ಸಹ ತಮಗನಿಸಿದ್ದನ್ನು, ಮುಕ್ತವಾಗಿ ಮಾತನಾಡುವ ವಾತಾವರಣವಿದೆ. ಕರೀನಾಗೆ ಸರಿ ಎನಿಸಿದ್ದನ್ನು ಕೇಳಿದ್ದಾರೆ. ಹಾಗೆಂದ ಮಾತ್ರಕ್ಕೆ ಅದು ತಪ್ಪು ಎಂದು ಇನ್ನೊಬ್ಬರು ಹೇಳುವುದು ಸರಿಯಲ್ಲ. ಅವರ ಸಂಭಾವನೆಯನ್ನು ತೀರ್ಮಾನಿಸುವುದಕ್ಕೆ ಬೇರೆಯವರು ಯಾರು?’ ಎಂದು ಕೇಳಿದ್ದಾರೆ.