ಅರೆಸ್ಟ್ ಆಗಿರುವ ಗಂಡನಿಂದ ಶಿಲ್ಪಾ ಶೆಟ್ಟಿ ಸಿನಿಮಾಕ್ಕೂ ಎಫೆಕ್ಟ್?

hungama
Published on

ಮುಂಬೈ: ನಟಿ ಶಿಲ್ಪಾಶೆಟ್ಟಿ ಪತಿ ರಾಜ್​ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಚಿತ್ರಗಳನ್ನು ಚಿತ್ರಿಸಿ ಆ್ಯಪ್ ಒಂದರಲ್ಲಿ ಹಾಕಲಾಗುತ್ತಿತ್ತು ಎನ್ನುವ ಆರೋಪ ಅವರ ಮೇಲೆ ಕೇಳಿಬಂದಿದೆ. ರಾಜ್ ಕುಂದ್ರಾ ಅವರ ಮೇಲೆ ಕೇಳಿಬಂದಿರುವ ಈ ಆರೋಪದಿಂದಾಗಿ ಶಿಲ್ಪಾ ಶೆಟ್ಟಿ ಸಿನಿಮಾ ಭವಿಷ್ಯಕ್ಕೆ ಏನಾದರೂ ಎಫೆಕ್ಟ್ ಆಗಲಿದೆಯೇ? ಅವರ ಸಿನಿಮಾ ಬಿಡುಗಡೆಗೆ ಏನಾದರೂ ಸಮಸ್ಯೆ ಆಗಲಿದೆಯೇ ಎನ್ನುವ ಚರ್ಚೆಗಳೂ ಆರಂಭವಾಗಿದೆ.

ಕಳೆದ 14 ವರ್ಷಗಳಿಂದ ಸಿನಿಮಾ ಕ್ಷೇತ್ರದಿಂದ ಹೊರಗುಳಿದಿದ್ದ ಶಿಲ್ಪಾ ಶೆಟ್ಟಿ ಈ ವರ್ಷ ಮತ್ತೆ ಸಿನಿಮಾಕ್ಕೆ ವಾಪಸಾಗಿದ್ದು, ಹಂಗಾಮ 2 ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಇದೇ 23ರಂದು ಡಿಸ್ನೇ ಹಾಟ್​ಸ್ಟಾರ್​ನಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಈ ರೀತಿಯ ಸಮಸ್ಯೆ ಎದುರಾಗಿದ್ದು, ಅದರಿಂದ ಸಿನಿಮಾಕ್ಕೆ ಹೊಡೆತ ಬೀಳಬಹುದು ಎನ್ನುವ ಮಾತು ಕೇಳಿಬರುತ್ತಿತ್ತು. ಅದಕ್ಕೆ ಸಿನಿಮಾದ ನಿರ್ಮಾಪಕರು ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ರತನ್ ಜೈನ್, "ಹಂಗಾಮ 2 ಸಿನಿಮಾಕ್ಕೂ, ರಾಜ್ ಕುಂದ್ರಾ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ. ಈ ಕೇಸ್​ನಲ್ಲಿ ಶಿಲ್ಪಾ ಒಬ್ಬ ನಟಿ ಅಷ್ಟೇ. ಅವರು ಅವರ ಕೆಲಸವನ್ನು ಸಂಪೂರ್ಣವಾಗಿ ಮುಗಿಸಿದ್ದಾರೆ. ಅವರಿಗೂ ಪ್ರಕರಣಕ್ಕೂ ಸಂಬಂಧವಿರುವ ಬಗ್ಗೆಯೂ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ. ಹಾಗಿದ್ದ ಮೇಲೆ ನಮ್ಮ ಸಿನಿಮಾಕ್ಕೆ ಅದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ" ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net