ಅಮ್ಮನ ತೋಟದಲ್ಲಿ ಜೋಳ ಬಿತ್ತನೆ ಮಾಡಿದ 'ಜೋಗಿ' ಪ್ರೇಮ್​

Prem - Final
Published on

ಮಂಡ್ಯ: ಭೂಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಸೋಮವಾರ ಹಲವು ರೈತ ಸಂಘಟನೆಗಳು ಬಂದ್​ಗೆ ಕರೆ ನೀಡಿದ್ದವು. ಇನ್ನು ಶ್ರೀಮುರಳಿ, ಧನಂಜಯ್​, 'ಆ ದಿನಗಳು' ಚೇತನ್​ ಸೇರಿದಂತೆ ಹಲವು ಕನ್ನಡ ನಟರು ರೈತರ ಪರವಾಗಿ ಮಾತನಾಡಿದ್ದರು.

ಈಗ ನಟ-ನಿರ್ದೇಶಕ ಪ್ರೇಮ್​ ಸಹ ರೈತರ ಪರವಾಗಿ ಮಾತನಾಡಿದ್ದಾರೆ. ಯಾವುದೇ ಒಂದು ಪಕ್ಷ ಮತ್ತು ಸಿದ್ಧಾಂತದ ಬಗ್ಗೆ ಮಾತನಾಡದೆ, ರೈತನ ಪರವಾಗಿ ನಿಂತಿದ್ದಾರೆ. ರೈತನ ಹೆಸರಿನಲ್ಲಿ ರಾಜಕೀಯ ಮಾಡ್ಬೇಡ್ರಪ್ಪ ಎಂದು ಕಳಕಳಿಯಿಂದ ಮಾತನಾಡಿದ್ದಾರೆ.

ಪ್ರೇಮ್​ ಅವರ ಮಂಡ್ಯ ಜಿಲ್ಲೆಯಲ್ಲಿ ತಮ್ಮ ತಾಯಿಯ ಹೆಸರಿನಲ್ಲಿ ತೋಟ ಮಾಡಿರುವುದು ಗೊತ್ತಿರಬಹುದು. ಚಿತ್ರಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಿದ್ದರೆ, ಪ್ರೇಮ್​ ಬಹುತೇಕ ಅಲ್ಲೇ ಇದ್ದು ಕೃಷ್ಟಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಇತ್ತೀಚೆಗೆ ಸಹ ಅವರು ಅಲ್ಲಿ ಜೋಳ ಬಿತ್ತನೆ ಮಾಡಿದ್ದಾರೆ.

ಅಷ್ಟೇ ಅಲ್ಲ, ಸ್ವತಃ ಅವರೇ ತಮ್ಮ ಹೊಲದಲ್ಲಿ ಟ್ರಾಕ್ಟರ್​ ಓಡಿಸಿದ್ದಾರೆ. ಪ್ರೇಮ್​ ಟ್ರಾಕ್ಟರ್​ ಓಡಿಸುತ್ತಿರುವ ವಿಡಿಯೋವೊಂದನ್ನು ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಅವರು, 'ಅಮ್ಮನ ತೋಟದಲ್ಲಿ, ಜೋರು ಮಳೆ ಬಂದು ನಿಂತಾಗ ಜೋಳ ಬಿತ್ತನೆ ಮಾಡ್ತಿದ್ವಿ, ಆಗ ಸಿ ಅಶ್ವಥ್ ಅವರು ಹಾಡಿದ ಈ ಹಾಡು ನೆನಪಾಯ್ತು. ಮಳೆ ಬೆಳೆ ಜೀವನ ಅಂತ ದಿನ ನಿತ್ಯ ದುಡೀತಾನೆ ರೈತ, ಅವನನ್ನ ತಂದು ಬೀದೀಲಿ ನಿಲ್ಲಿಸಬೇಡ್ರೋ ... ರೈತನ ಹೆಸರಲ್ಲಿ ರಾಜಕೀಯ ಮಾಡ್ಬೇಡ್ರಪ್ಪ' ಎಂದು ಮನವಿ ರೂಪದ ಸಲೆಹ ನೀಡಿದ್ದಾರೆ ಪ್ರೇಮ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net