

ಕನ್ನಡತಿ ಪ್ರಣೀತಾ ಸುಭಾಷ್ ಬಾಲಿವುಡ್ಗೆ ಪದಾರ್ಪಣೆ ಮಾಡಿರುವುದು ಗೊತ್ತಿರುವ ವಿಚಾರ. ಈಗಾಗಲೇ ಅಜಯ್ ದೇವಗನ್ ಜತೆಗೆ ‘ಭುಜ್; ದಿ ಪ್ರೖೆಡ್ ಆಫ್ ಇಂಡಿಯಾ’ ಚಿತ್ರದಲ್ಲಿ ನಟಿಸಿದ್ದಾರವರು. ಅದೇ ರೀತಿ ‘ಹಂಗಾಮಾ 2’ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಇದೀಗ ವಿಷಯ ಏನೆಂದರೆ, ಈ ಎರಡು ಸಿನಿಮಾಗಳ ಪೈಕಿ ‘ಹಂಗಾಮಾ 2’ ಚಿತ್ರ ಜುಲೈ 23ಕ್ಕೆ ಡಿಸ್ನಿ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ. ಈ ವಿಚಾರವನ್ನು ಸ್ವತಃ ಚಿತ್ರತಂಡ ಬುಧವಾರ ಅಧಿಕೃತ ಘೋಷಣೆ ಮಾಡಿದೆ.
2003ರಲ್ಲಿ ಬಾಲಿವುಡ್ನಲ್ಲಿ ತೆರೆಕಂಡ ‘ಹಂಗಾಮಾ’ ಚಿತ್ರದ ಸೀಕ್ವೆಲ್ ಇದಾಗಿದ್ದು, ನಿರ್ದೇಶಕ ಪ್ರಿಯದರ್ಶನ್ ಇಲ್ಲಿಯೂ ನಿರ್ದೇಶಕರಾಗಿ ಮುಂದುವರಿದಿದ್ದಾರೆ. ಕಮರ್ಷಿಯಲ್ ಅಂಶಗಳಿರುವ ಹಾಸ್ಯಪ್ರಧಾನ ಸಿನಿಮಾದಲ್ಲಿ ಪರೇಶ್ ರಾವಲ್, ಶಿಲ್ಪಾ ಶೆಟ್ಟಿ, ಪ್ರಣೀತಾ ಸುಭಾಷ್, ಮಿಜಾನ್ ಜಾಫ್ರಿ ಮುಖ್ಯಭೂಮಿಕೆಯಲ್ಲಿದ್ದಾರೆ. 30 ಕೋಟಿ ಮೊತ್ತಕ್ಕೆ ಈ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಡಿಸ್ನಿ ಹಾಟ್ಸ್ಟಾರ್ ಪಡೆದಿದ್ದು, ಸ್ಯಾಟಿಲೈಟ್ ಹಕ್ಕುಗಳು ಆರೇಳು ಕೋಟಿಗೆ ಮಾರಾಟವಾಗಿದೆ. ಆಡಿಯೋ ಸೇರಿ ಇನ್ನಿತರ ಹಕ್ಕುಗಳ ಮಾರಾಟವನ್ನು ಲೆಕ್ಕ ಹಾಕಿದರೆ, ಒಟ್ಟಾರೆ 40 ಕೋಟಿಯನ್ನು ‘ಹಂಗಾಮಾ 2’ ಚಿತ್ರ ಪಡೆದುಕೊಂಡಿದೆ.
ಇನ್ನು ಪ್ರಣೀತಾ ವಿಚಾರಕ್ಕೆ ಬರುವುದಾದರೆ ಬಿಡುಗಡೆಗೆ ಸಿದ್ಧವಿರುವ ಎರಡು ಹಿಂದಿ ಸಿನಿಮಾ ಹೊರತುಪಡಿಸಿದರೆ, ಮತ್ತೊಂದು ಬಾಲಿವುಡ್ ಚಿತ್ರ ಮತ್ತು ಕನ್ನಡದ ಜತೆಗೆ ಪರಭಾಷೆಯ ಕೆಲ ಪ್ರಾಜೆಕ್ಟ್ಗಳ ಕಥೆಗಳನ್ನೂ ಅವರು ಕೇಳಿದ್ದಾರೆ. ಇನ್ನೇನು ಶೀಘ್ರದಲ್ಲಿಯೇ ಅವುಗಳ ಘೋಷಣೆಯೂ ಆಗಲಿದೆ.