

ಮುಂಬೈ: ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರವು ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುತ್ತಿದೆ. ಈಗಾಗಲೇ ಚಿತ್ರವು ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 700 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. 'ಪಠಾಣ್' ಬಿಡುಗಡೆಗೂ ಮುನ್ನ ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಅಂತಿದ್ದವರೆಲ್ಲ, ಈಗ ಚಿತ್ರದ ಯಶಸ್ಸನ್ನು ನೋಡಿ ದಂಗಾಗಿದ್ದಾರೆ.
'ಬಾಯ್ಕಾಟ್ ಪಠಾಣ್' ಅಭಿಯಾನ ಶುರು ಮಾಡಿದ್ದವರ ವಿರುದ್ಧ ಇದೀಗ ಬಹುಭಾಷಾ ನಟ ಪ್ರಕಾಶ್ ಹರಿಹಾಯ್ದಿದ್ದಾರೆ. ಅವರೆಲ್ಲ ಬರೀ ಬೊಗಳುವವರು, ಕಚ್ಚುವವರಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, 'ಕೆಲವರು 'ಪಠಾಣ್' ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಹೊರಟಿದ್ದರು. ಆ ಚಿತ್ರ 700 ಕೋಟಿ ರೂ. ಕಲೆಕ್ಷನ್ ಮಾಡಿದ್ದೆ. ಚಿತ್ರವನ್ನು ಬ್ಯಾನ್ ಮಾಡಿಸಬೇಕು ಎಂದು ಹೊರಟಿದ್ದ ಮತಾಂಧರು, ಮೋದಿ ಅವರ ಚಿತ್ರವನ್ನು ನೋಡಲಿಲ್ಲ. ಆ ಚಿತ್ರ 30 ಕೋಟಿ ರೂ. ಕಲೆಕ್ಷನ್ ಮಾಡಲಿಲ್ಲ. ಅವರೆಲ್ಲ ಬರೀ ಬೊಗಳುವುದಕ್ಕೆ ಸರಿ, ಕಚ್ಚುವುದಕ್ಕಲ್ಲ. ಇದೊಂದು ಶಬ್ದ ಮಾಲಿನ್ಯ' ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು 'ಪಠಾಣ್' ಚಿತ್ರದ 'ಬೇಷರಮ್ ರಂಗ್' ಹಾಡು ಬಿಡುಗಡೆಯಾಗಿ ವೈರಲ್ ಆಗಿತ್ತು. ಈ ಹಾಡಿನಲ್ಲಿ ಕೇಸರಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದಕ್ಕೆ ಸಾಕಷ್ಟು ಗಲಾಟೆಯಾಗಿತ್ತು. ಈ ಹಾಡು ಅಸಭ್ಯ ಮತ್ತು ಅಶ್ಲೀಲವಾಗಿದೆ ಎಂದು ಹಲವರು ಟೀಕೆ ಮಾಡಿದ್ದರು. ಅಷ್ಟೇ ಅಲ್ಲ, ಚಿತ್ರವನ್ನು ನಿಷೇಧಿಸಬೇಕು ಎನ್ನುವ ಕೂಗು ಶುರುವಾಗಿ, ಸೋಷಿಯಲ್ ಮೀಡಿಯಾದಲ್ಲಿ ‘Boycott Pathaan’ ಎನ್ನುವ ಅಭಿಯಾನ ಪ್ರಾರಂಭವಾಗಿತ್ತು.
ಇದನ್ನೂ ಓದಿ: ವಿಜಯ್ ಹೊಸ ಚಿತ್ರ ಪ್ರಾರಂಭ; ಹೆಸರೂ ರಿವೀಲ್ ಆಯ್ತು …
ಈ ಕುರಿತು ಮಾತನಾಡಿದ್ದ ಅವರು, 'ಕೇಸರಿ ಬಣ್ಣದವರು ರೇಪಿಸ್ಟ್ಗಳಿಗೆ ಮಾಲೆ ಹಾಕುತ್ತಾರೆ. ದ್ವೇಷದ ಮಾತುಗಳನ್ನಾಡುತ್ತಾರೆ. ಕೇಸರಿ ಬಣ್ಣ ತೊಟ್ಟವರು ಮೈನರ್ಗಳನ್ನು ರೇಪ್ ಮಾಡುತ್ತಾರೆ. ಆದರೆ, ಚಿತ್ರದಲ್ಲಿ ಕೇಸರಿ ಬಟ್ಟೆ ತೊಟ್ಟರೆ ಸಹಿಸುವುದಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದರು.