ಈಗ ನೋಡಿದ್ದು ಮುಂದಿನ ಭಾಗವೇ; ಕಾಂತಾರ ಶತದಿನೋತ್ಸವ ಸಮಾರಂಭದಲ್ಲಿ ರಿಷಬ್

Kantara
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಾಂತಾರ’ ಚಿತ್ರವು ಜನವರಿಯಲ್ಲೇ ನೂರು ದಿನ ಪೂರೈಸಿತ್ತು. ಈ ಶತದಿನೋತ್ಸವ ಸಂಭ್ರಮವನ್ನು ಚಿತ್ರತಂಡದವರು ಭಾನುವಾರ ಆಚರಿಸಿದ್ದಾರೆ. ಭಾನುವಾರ ಬಂಟರ ಸಂಘದ ಭವನದಲ್ಲಿ ನಡೆದ ವಿಶೇಷ ಸಂಭ್ರಮದಲ್ಲಿ ಚಿತ್ರಕ್ಕೆ ದುಡಿದ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಂಡ ಚಿತ್ರಮಂದಿರದ ಮಾಲೀಕರಿಗೆ ಪಾರಿತೋಷಕಗಳನ್ನು ಕೊಟ್ಟು ಚಿತ್ರತಂಡದವರು ಗೌರವಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ, ‘ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದಲ್ಲಿ ಚಿತ್ರೀಕರಣಗೊಂಡ ಒಂದು ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಅದಕ್ಕೆ ಕಾರಣ ಹೊಂಬಾಳೆ ಫಿಲಂಸ್. ಸಿನಿಮಾಗೆ ಬಜೆಟ್ ಎನ್ನುವುದು ಮುಖ್ಯವಲ್ಲ, ಕಂಟೆಂಟ್ ಮುಖ್ಯ ಎಂಬುದನ್ನು ‘ಕಾಂತಾರ’ ತೋರಿಸಿಕೊಟ್ಟಿದೆ’ ಎಂದು ಹೇಳಿದ್ದಾರೆ.

ಇನ್ನು, ‘ಕಾಂತಾರ 2’ ಬಗ್ಗೆ ಮಾತನಾಡಿರುವ ಅವರು, ‘ಎಲ್ಲರೂ ‘ಕಾಂತಾರ 2’ ಯಾವಾಗ ಬರುತ್ತದೆ ಎಂದು ಕೇಳುತ್ತಿದ್ದಾರೆ. ನಿಜ ಹೇಳಬೇಕೆಂದರೆ, ಈಗ ಎಲ್ಲರೂ ನೋಡಿರುವುದು ‘ಕಾಂತಾರ 2’ ಚಿತ್ರವನ್ನೇ. ಮುಂದೆ ಬರುವುದು ‘ಕಾಂತಾರ’ದ ಮೊದಲ ಭಾಗ. ಚಿತ್ರದ ಕೆಲಸ ಸದ್ಯದಲ್ಲೇ ಪ್ರಾರಂಭವಾಗಲಿದೆ’ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ನಾಯಕಿ ಸಪ್ತಮಿ ಗೌಡ, ಗಾಯಕ ವಿಜಯಪ್ರಕಾಶ್ ಸೇರಿದಂತೆ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net