ಇದು ಹೊಸ ಮಾಫಿಯಾ; ಎರಡು ವರ್ಷದ ಬಳಿಕ ಹೊಸ ಹೇರ್ ಸ್ಟೈಲ್

Mafia
Published on

ಎರಡು ವರ್ಷಗಳೇ ಆಗಿತ್ತು ಪ್ರಜ್ವಲ್ ಕೂದಲಿಗೆ ಕತ್ತರಿ ಹಾಕಿಸಿ. ‘ವೀರಂ’ ಚಿತ್ರಕ್ಕಾಗಿ ಇಷ್ಟುದ್ದ ಕೂದಲು ಬಿಟ್ಟಿದ್ದ ಪ್ರಜ್ವಲ್, ಚಿತ್ರೀಕರಣ ಬಹುತೇಕ ಮುಗಿಯುತ್ತಿದ್ದಂತೆಯೇ ಕಟಿಂಗ್ ಮಾಡಿಸಿದ್ದಾರೆ. ಹೊಸ ಹೇರ್​ಸ್ಟೈಲ್​ನಲ್ಲಿ ‘ಮಾಫಿಯಾ’ ಎಂಬ ಚಿತ್ರ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್, ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡುತ್ತಿರುವುದರಿಂದ ಅವರ ಹೊಸ ಹೇರ್​ಸ್ಟೈಲ್ ಹೇಗಿರಬಹುದು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು. ಅಂದಹಾಗೆ, ಗುರುವಾರ ಬೆಳಗ್ಗೆ ‘ಮಾಫಿಯಾ’ ಚಿತ್ರದ ಮುಹೂರ್ತ ನಡೆಯಿತು.

ಚಿತ್ರತಂಡಕ್ಕೆ ಶುಭ ಹಾರೈಸುವುದಕ್ಕೆ ಪ್ರಿಯಾಂಕಾ ಉಪೇಂದ್ರ, ‘ದುನಿಯಾ’ ವಿಜಯ್’, ‘ಸಲಗ’ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಬಂದಿದ್ದರು. ಗಣ್ಯರು ಶುಭ ಹಾರೈಸಿ ಹೋಗುತ್ತಿದ್ದಂತೆಯೇ, ಚಿತ್ರತಂಡದವರು ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡರು. ಈ ಹಿಂದೆ ‘ಮಮ್ಮಿ - ಸೇವ್ ಮೀ’ ಮತ್ತು ‘ದೇವಕಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಲೋಹಿತ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಲೋಹಿತ್ ಚಿತ್ರಗಳನ್ನು ನೋಡಿದ್ದೀನಿ ಎನ್ನುವ ಪ್ರಜ್ವಲ್, ‘ಅವರು ಬಹಳ ರಿಸರ್ಚ್ ಮಾಡಿ ಸಿನಿಮಾ ಮಾಡುತ್ತಾರೆ. ಗೊತ್ತಿಲ್ಲದ ಎಷ್ಟೋ ವಿಷಯಗಳನ್ನು ಅವರು ಇಲ್ಲಿ ಹೇಳುವುದಕ್ಕೆ ಹೊರಟಿದ್ದಾರೆ’ ಎಂದು ‘ಮಾಫಿಯಾ’ ಬಗ್ಗೆ ಯಾವೊಂದು ಗುಟ್ಟನ್ನೂ ಬಿಟ್ಟುಕೊಡದೆ ಹೇಳಿದರು.

ಅದಿತಿಗೆ ಪ್ರಜ್ವಲ್ ಅವರನ್ನು ಪೊಲೀಸ್ ಪಾತ್ರಗಳಲ್ಲಿ ನೋಡುವಾಸೆಯಂತೆ. ಈ ಚಿತ್ರದಲ್ಲಿ ಅದೇ ಗೆಟಪ್​ನಲ್ಲಿ ಅವರ ಜತೆಗೆ ನಟಿಸುವ ಅವಕಾಶ ಸಿಕ್ಕಿರುವುದು ಬೋನಸ್ ಎನ್ನುವಂತೆ ಹೇಳಿದರು. ‘ಒರಟ’ ಚಿತ್ರದಲ್ಲಿ ನಾಯಕರಾಗಿದ್ದ ಪ್ರಶಾಂತ್, ಚಿತ್ರದಲ್ಲೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಸ್ತಿ ಸಂಭಾಷಣೆ, ಡಿಫರೆಂಟ್ ಡ್ಯಾನಿ ಸಾಹಸ, ಅನೂಪ್ ಸೀಳಿನ್ ಸಂಗೀತವಿರುವ ಈ ಚಿತ್ರವನ್ನು ಬೆಂಗಳೂರು ಕುಮಾರ್ ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net