

ಮುಂಬೈ: ಸಾಮಾಜಿಕ ಜಾಲತಾಣ ಹೆಚ್ಚೆಚ್ಚು ಬಳಕೆಯಾಗುತ್ತಾ ಹೋದಂತೆ ಸಿನಿಮಾ, ರಾಜಕೀಯ ಮತ್ತು ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳು ತಮ್ಮ ಟ್ವಿಟರ್, ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ನಲ್ಲಿ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ಏಕೈಕ ಸ್ಟಾರ್ ಕ್ರಿಕೆಟಿಗ ಅಂದರೆ ಅದು ವಿರಾಟ್ ಕೊಹ್ಲಿ. ಸದ್ಯ ಕೊಹ್ಲಿ 270 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಕೊಹ್ಲಿ ನಂತರ ಜಾಗತಿಕ ಸ್ಟಾರ್ ಹೀರೋಯಿನ್ ಪ್ರಿಯಾಂಕಾ ಚೋಪ್ರಾ 91.8 ಮಿಲಿಯನ್ ಫಾಲೋವರ್ಸ್ ಮತ್ತು ಪ್ರಧಾನಿ ನರೇಂದ್ರ ಮೋದಿ 91.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ತಾಜಾ ಸಂಗತಿ ಏನೆಂದರೆ, ಬಾಲಿವುಡ ಬ್ಯೂಟಿ ಶ್ರದ್ಧಾ ಕಪೂರ್ ಇದೀಗ ಮೋದಿಯನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. 'ಸ್ತ್ರೀ 2' ಚಿತ್ರದ ಯಶಸ್ಸಿನೊಂದಿಗೆ ಶ್ರದ್ಧಾ ಅವರ ಫಾಲೋವರ್ಸ್ ಸಂಖ್ಯೆ 91.4 ಮಿಲಿಯನ್ಗೆ ಏರಿಕೆ ಕಂಡಿದೆ. ಈ ಮೂಲಕ ಮೋದಿಯವರನ್ನು ಹಿಂದಿಕ್ಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು. ಅವರಿಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಪ್ರಧಾನಿ ಮೋದಿ ಹೋದಲ್ಲೆಲ್ಲಾ ಸಾವಿರಾರು ಅಭಿಮಾನಿಗಳು ಅವರ ಸುತ್ತಲೂ ಸೇರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಮೋದಿಗೆ ಒಳ್ಳೆಯ ಹೆಸರಿದೆ. ಪ್ರಧಾನಿ ಮೋದಿ ಅವರು ಇನ್ಸ್ಟಾಗ್ರಾಂನಲ್ಲಿ ಸುಮಾರು 91.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇದೀಗ ನಟಿ ಶ್ರದ್ಧಾ ಕಪೂರ್ ಇದನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಪ್ರಸ್ತುತ, ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಪ್ರಿಯಾಂಕಾ ಚೋಪ್ರಾ ಎರಡನೇ ಸ್ಥಾನದಲ್ಲಿ ಮತ್ತು ಶ್ರದ್ಧಾ ಕಪೂರ್ ಮೂರನೇ ಸ್ಥಾನದಲ್ಲಿದ್ದಾರೆ. ಆಲಿಯಾ ಭಟ್ 85.1 ಮಿಲಿಯನ್ ಮತ್ತು ದೀಪಿಕಾ ಪಡುಕೋಣೆ 79.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಟ್ವಿಟರ್ನಲ್ಲಿ 101.2 ಮಿಲಿಯನ್ ಹಿಂಬಾಲಕರೊಂದಿಗೆ ಪ್ರಧಾನಿ ಮೋದಿ ಮೊದಲ ಸ್ಥಾನದಲ್ಲಿದ್ದಾರೆ.
ಅಂದಹಾಗೆ ಶ್ರದ್ಧಾ ಕಪೂರ್ ಖ್ಯಾತ ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಪುತ್ರಿ. ಯುವ ನಿರ್ದೇಶಕ ಸುಜಿತ್ ಅವರ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಅಭಿನಯದ 'ಸಾಹೋ' ಚಿತ್ರದ ಮೂಲಕ ಶ್ರದ್ಧಾ ಕಪೂರ್ ತೆಲುಗು ಪರದೆಯ ಮೇಲೆ ಪಾದಾರ್ಪಣೆ ಮಾಡಿದರು. ಆ ನಂತರ ಮತ್ತೆ ದಕ್ಷಿಣ ಭಾರತದ ಸಿನಿಮಾದಲ್ಲಿ ಕಾಣಸಿಕೊಳ್ಳಲಿಲ್ಲ.
ಈ ಹಿಂದಿನ ಬ್ಲಾಕ್ ಬಸ್ಟರ್ ಸ್ತ್ರೀ ಚಿತ್ರದ ಮುಂದುವರಿದ ಭಾಗವಾಗಿ ಅಮರ್ ಕೌಶಿಕ್ ನಿರ್ದೇಶನದ 'ಸ್ತ್ರಿ 2' ಆಗಸ್ಟ್ 15 ರಂದು ಬಿಡುಗಡೆಯಾಯಿತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಐದು ದಿನಕ್ಕೆ ವಿಶ್ವಾದ್ಯಂತ 300 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಮಿಂಚಿದ್ದಾರೆ. ಹಾರರ್ ಮತ್ತು ಕಾಮಿಡಿ ಥ್ರಿಲ್ಲರ್ ಆಗಿರುವ ಈ ಚಿತ್ರ ಬಾಕ್ಸ್ಆಫೀಸ್ನಲ್ಲಿ ಮತ್ತಷ್ಟು ಕಮಾಲ್ ಮಾಡಲಿದೆ ಎನ್ನುತ್ತಾರೆ ಸಿನಿ ತಜ್ಞರು. (ಏಜೆನ್ಸೀಸ್)