ರೋಹಿತ್​ ಅಲ್ಲ ಈತನೇ ಟೀಮ್​ ಇಂಡಿಯಾದ ರಿಯಲ್​ ಲೀಡರ್​! ಮಾಜಿ ಬ್ಯಾಟಿಂಗ್​ ಕೋಚ್​ ಅಚ್ಚರಿ ಹೇಳಿಕೆ

Team India
Published on

ನವದೆಹಲಿ: ನಾಯಕ ರೋಹಿತ್ ಶರ್ಮ ಟೀಂ ಇಂಡಿಯಾವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ತಂಡವು ಅನೇಕ ವಿಜಯಗಳನ್ನು ಸಾಧಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಹೋಯಿತು. 2023ರ ಏಕದಿನ ವಿಶ್ವಕಪ್‌ನಲ್ಲೂ ಫೈನಲ್ ತಲುಪಿತ್ತು. ಈ ಎರಡು ಟೂರ್ನಿಗಳಲ್ಲಿ ಅಂತಿಮ ಹಂತದಲ್ಲಿ ಜಾರಿದರೂ, ಟಿ20 ವಿಶ್ವಕಪ್-2024ರಲ್ಲಿ ಚಾಂಪಿಯನ್ ಆದರು. ನಾಯಕನಾಗಿ ರೋಹಿತ್ ಯಶಸ್ಸಿನಲ್ಲಿ ಇನ್ನೊಬ್ಬ ಆಟಗಾರನೊಬ್ಬನ ಪಾತ್ರ ಬಹಳ ಮುಖ್ಯವಾಗಿದೆ. ಆ ಆಟಗಾರ ನೀಡಿದ ಬೆಂಬಲದಿಂದಾಗಿಯೇ ಹಿಟ್‌ಮ್ಯಾನ್​ ಮೇಲಿನ ಒತ್ತಡ ಸಾಕಷ್ಟು ಕಡಿಮೆಯಾಗಿದೆ. ಬ್ಯಾಟ್ಸ್‌ಮನ್ ಆಗಿ ರನ್​ ಮಳೆ ಹರಿಸುವುದರ ಜೊತೆಗೆ ತನ್ನ ಹಿರಿತನವನ್ನು ಬಳಸಿ, ರೋಹಿತ್​ ಬೆಂಬಲಕ್ಕೆ ನಿಂತರು. ಅನೇಕ ಗೆಲುವುಗಳನ್ನು ತಂದುಕೊಟ್ಟರು. ಆ ಆಟಗಾರ ಬೇರೆ ಯಾರೂ ಅಲ್ಲ, ಅವರೇ ರನ್​ ಮೆಶಿನ್​ ವಿರಾಟ್ ಕೊಹ್ಲಿ. ಹಾಗಾಗಿಯೇ ಅವರೊಬ್ಬ ನಿಜವಾದ ನಾಯಕ ಎಂದು ಭಾರತದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಹೇಳಿದ್ದಾರೆ.

ಟೀಮ್​ ಇಂಡಿಯಾದಲ್ಲಿ ಕೊಹ್ಲಿ ಪಾತ್ರದ ಬಗ್ಗೆ ವಿಕ್ರಮ್ ರಾಥೋರ್ ಆಸಕ್ತಿದಾಯಕ ಕಾಮೆಂಟ್​ಗಳನ್ನು ಮಾಡಿದ್ದಾರೆ. ಕೊಹ್ಲಿ ಓರ್ವ ನಿಜವಾದ ನಾಯಕ. ಅವರು ಭಾರತ ತಂಡದಲ್ಲಿ ಎಂದಿಗೂ ಬಿಟ್ಟುಕೊಡದ ಮನೋಭಾವವನ್ನು ಕಲಿಸಿದರು. ಯಾವುದೇ ಪರಿಸ್ಥಿತಿಯಲ್ಲಿ ಪಂದ್ಯಗಳನ್ನು ಗೆಲ್ಲುವ ಆಟಗಾರರ ಮನಸ್ಥಿತಿಯನ್ನು ಬದಲಾಯಿಸಿದರು. ಗೆಲುವಿಗಾಗಿ ಹೋರಾಡಲು ಆಟಗಾರರನ್ನು ತಯಾರು ಮಾಡಿದರು ಎಂದು ತರುವರ್ ಕೊಹ್ಲಿ ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ವಿಕ್ರಮ್ ರಾಥೋರ್ ಹೇಳಿದರು.

ಐಪಿಎಲ್‌ನಲ್ಲಿ 980 ರನ್ ಗಳಿಸಿದ ನಂತರ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹೋಗಿ ಅಲ್ಲಿ ದ್ವಿಶತಕ ಗಳಿಸಿದ್ದರು ಎಂದು ಕೊಹ್ಲಿ ಬಗ್ಗೆ ರಾಥೋರ್ ಹೇಳಿದರು. 2016ರ ಜುಲೈ ತಿಂಗಳಲ್ಲಿ ವಿರಾಟ್ ಕೊಹ್ಲಿ ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ದ್ವಿಶತಕ ಗಳಿಸಿದರು. ಈ ಮೂಲಕ ವಿದೇಶಿ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ಭಾರತೀಯ ನಾಯಕನೆಂಬ ಇತಿಹಾಸ ನಿರ್ಮಿಸಿದರು. ಐಪಿಎಲ್​ನಲ್ಲಿ 40 ಸಿಕ್ಸರ್​ ಸೇರಿದಂತೆ 980 ರನ್​ ಗಳಿಸಿದ್ದ ಕೊಹ್ಲಿ ವಿಂಡೀಸ್​ ವಿರುದ್ಧದ ಟೆಸ್ಟ್​ನಲ್ಲಿ ಒಂದೇ ಒಂದು ಸಿಕ್ಸರ್​ ಸಿಡಿಸದೇ ದ್ವಿಶತಕ ಗಳಿಸಿದರು. ಇದು ವಿರಾಟ್ ಅವರ ಮನಸ್ಥಿತಿ ಮತ್ತು ಬದ್ಧತೆಗೆ ಸಾಕ್ಷಿ ಎಂದು ರಾಥೋರ್ ಮೆಚ್ಚುಗೆಯ ಮಾತುಗಳನ್ನಾಡಿದರು.

ಪಂದ್ಯದ ಪರಿಸ್ಥಿತಿಗಳು ಮತ್ತು ಎದುರಾಳಿ ತಂಡವನ್ನು ಅವಲಂಬಿಸಿ ಅವರು ತಮ್ಮ ಆಟವನ್ನು ಸರಿಹೊಂದಿಸುತ್ತಾರೆ. ತನ್ನೆಲ್ಲ ಗಮನವನ್ನು ಗುರಿಯ ಮೇಲೆ ಇಡುತ್ತಾರೆ. ಇದು ಕೊಹ್ಲಿ ಅವರಲ್ಲಿರುವ ಉತ್ತಮ ಗುಣವಾಗಿದೆ ಎಂದು ರಾಥೋರ್ ಕೊಂಡಾಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net