

ನವದೆಹಲಿ: ಸಿನಿಮಾ ತಾರೆಯರು, ರಾಜಕಾರಣಿಗಳು ಮತ್ತು ಕ್ರಿಕೆಟ್ ತಾರೆಯರ ಜೀವನಾಧಾರಿತ ಬಯೋಪಿಕ್ಗಳು ತಯಾರಾಗುತ್ತಿರುವುದು ಗೊತ್ತೇ ಇದೆ. ಒಂದು ಕಾಲದಲ್ಲಿ ಬಾಲಿವುಡ್ನಲ್ಲಿ ಹೆಚ್ಚೆಚ್ಚು ಬಯೋಪಿಕ್ ಸಿನಿಮಾಗಳು ಬರುತ್ತಿದ್ದವು. ಇದೀಗ ಬೇರೆ ಇಂಡಸ್ಟ್ರಿಗಳೂ ಕೂಡ ಒಳ್ಳೊಳ್ಳೆ ಬಯೋಪಿಕ್ ಸಿನಿಮಾಗಳನ್ನು ಮಾಡಿ ಪ್ರೇಕ್ಷಕರನ್ನು ರಂಜಿಸುತ್ತಿವೆ. ಸೆಲೆಬ್ರಿಟಿಗಳು ತಮ್ಮ ಬದುಕಿನಲ್ಲಿ ಕಷ್ಟ-ಸುಖಗಳನ್ನು ಮೆಟ್ಟಿ ನಿಂತು ಯಶಸ್ಸನ್ನು ಸಾಧಿಸಿದಂತಹ ಸ್ಫೂರ್ತಿದಾಯಕ ಕತೆಯನ್ನು ಬಯೋಪಿಕ್ ಹೊಂದಿರಲಿದೆ.
ಇದೀಗ ಮತ್ತೊಂದು ಬಯೋಪಿಕ್ ಸಿನಿಮಾ ಕೆಲಸಗಳು ತೆರೆಯ ಹಿಂದೆ ಆರಂಭವಾಗಿದೆ. ಟೀಮ್ ಇಂಡಿಯಾ ಲೆಜೆಂಡ್ ಯುವರಾಜ್ ಸಿಂಗ್ ಅವರ ಜೀವನ ಕಥೆಯನ್ನಾಧರಿಸಿ ಚಿತ್ರ ನಿರ್ಮಾಣವಾಗಲಿದೆ. ನಿನ್ನೆಯಷ್ಟೇ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಬಾಲಿವುಡ್ನ ದೊಡ್ಡ ನಿರ್ಮಾಪಕರಾದ ಭೂಷಣ್ ಕುಮಾರ್ ಮತ್ತು ರವಿಭಾಗ್ ಚಂದನ್ ಅವರು ಯುವಿ ಅವರ ಬಯೋಪಿಕ್ ಮಾಡುವುದಾಗಿ ಬಹಿರಂಗಪಡಿಸಿದ್ದಾರೆ.
ಯುವಿ ಭಾರತಕ್ಕೆ ಎರಡು ವಿಶ್ವಕಪ್ಗಳನ್ನು ನೀಡಿದ್ದಾರೆ. ಒಂದೇ ಓವರ್ನಲ್ಲಿ 6 ಸಿಕ್ಸರ್ ಬಾರಿಸಿದ ಇನ್ನಿಂಗ್ಸ್ ಅಂತೂ ಇಂದಿಗೂ ಕಣ್ಣಿಗೆ ಕಟ್ಟುವಂತಿದೆ. ಅಲ್ಲದೆ, ಕ್ಯಾನ್ಸರ್ ವಿರುದ್ಧವು ಯುವಿ ಹೋರಾಡಿದ್ದಾರೆ. ಈ ಎಲ್ಲ ಕ್ಷಣಗಳನ್ನು ಬಯೋಪಿಕ್ನಲ್ಲಿ ತೋರಿಸಲಿದ್ದಾರೆ. ಈ ಬಯೋಪಿಕ್ ಘೋಷಣೆಯಾಗುತ್ತಿದ್ದಂತೆ ಯುವಿ ಪಾತ್ರದಲ್ಲಿ ಯಾರು ನಟಿಸುತ್ತಾರೆ? ನಾಯಕಿಯಾಗಿ ಯಾರು ನಟಿಸಲಿದ್ದಾರೆ? ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಅಲ್ಲದೆ, ಈ ಬಯೋಪಿಕ್ನಲ್ಲಿ ಏನು ಹೈಲೈಟ್ ಆಗಲಿದೆ? ಎಂಬುದನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದರ ನಡುವೆ ಯುವರಾಜ್ ಸಿಂಗ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ.
ನಿರಂತರವಾಗಿ ಸವಾಲುಗಳನ್ನು ಎದುರಿಸುತ್ತಿರುವ ಮತ್ತು ತಮ್ಮ ಕನಸನ್ನು ನನಸಾಗಿಸಲು ಪ್ರಯತ್ನಿಸುತ್ತಿರುವವರಿಗೆ ಈ ಚಿತ್ರವನ್ನು ಅರ್ಪಿಸುತ್ತಿದ್ದೇನೆ ಎಂದು ಯುವಿ ಹೇಳಿದ್ದಾರೆ. ಅವರಿಗಾಗಿಯೇ ಈ ಬಯೋಪಿಕ್ ಮಾಡುತ್ತಿದ್ದೇವೆ ಎಂದಿದ್ದಾರೆ. ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳಿಗೆ ತನ್ನ ಕಥೆಯನ್ನು ಹೇಳಲು ಉತ್ಸುಕನಾಗಿದ್ದೇನೆ ಮತ್ತು ಇದು ನನಗೆ ದೊರೆತ ದೊಡ್ಡ ಗೌರವ ಎಂದು ಯುವಿ ಹೇಳಿದ್ದಾರೆ.
ನನ್ನ ಜೀವನದ ಕತೆಯನ್ನು ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ಹೇಳವುದೇ ನನಗೆ ಸಿಕ್ಕ ಗೌರವವಾಗಿದೆ. ಜೀವನದಲ್ಲಿ ಅನೇಕ ಏರಿಳಿತಗಳ ನಡುವೆಯೂ ಕ್ರಿಕೆಟ್ ನನ್ನ ಪ್ರೀತಿಯ ಮತ್ತು ನನ್ನ ಶಕ್ತಿಯ ಮೂಲವಾಗಿದೆ. ಆಟದ ಮೇಲಿನ ಪ್ರೀತಿ ಯಾವತ್ತೂ ಕಡಿಮೆಯಾಗಿಲ್ಲ. ತಮ್ಮ ಕನಸಿಗಾಗಿ ಸದಾ ಶ್ರಮಿಸುವವರಿಗೆ ಈ ಚಿತ್ರ ಸ್ಫೂರ್ತಿ ನೀಡುತ್ತದೆ ಎಂದು ಭಾವಿಸುತ್ತೇನೆ ಎಂದು ಯುವರಾಜ್ ಹೇಳಿದ್ದಾರೆ.
ಇನ್ನು ಈ ಬಯೋಪಿಕ್ನಲ್ಲಿ ಯುವಿ ಹೀರೋ ಆಗಿ ಕಾಣಿಸಿಕೊಂಡರೆ ವಿಲನ್ ಆಗಿ ಯಾರನ್ನು ತೋರಿಸ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕೆಲ ನೆಟ್ಟಿಗರು ಎಂಎಸ್ ಧೋನಿ ಅವರನ್ನು ವಿಲನ್ ಆಗಿ ತೋರಿಸುತ್ತಾರೆ ಎಂದು ಹೇಳುತ್ತಾರೆ. ಮೊದಲು ತಂಡಕ್ಕೆ ಬಂದ ಯುವರಾಜ್ ಬಿಟ್ಟು ಧೋನಿಯನ್ನು ನಾಯಕನನ್ನಾಗಿ ಮಾಡಲಾಗಿದೆ. ಅನೇಕ ಸಂದರ್ಭಗಳಲ್ಲಿ ಯುವಿಗೆ ಅನ್ಯಾಯವಾಗಿದೆ. ಆದ್ದರಿಂದ, ಮಹಿಯನ್ನು ವಿಲನ್ ಆಗಿ ತೋರಿಸಲಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ಸಿನಿಮಾ ರಿಲೀಸ್ ಆಗುವವರೆಗೆ ಈ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. (ಏಜೆನ್ಸೀಸ್)