ಬೀದಿಗೆ ಬಿದ್ದ ಮನೆ ಜಗಳ! ತಂದೆ-ಮಗನ ಫಾರ್ಚುನರ್​ vs ಸಫಾರಿ ಕಿತ್ತಾಟದಲ್ಲಿ ಬೈಕ್​ ಸವಾರರಿಬ್ಬರ ಸ್ಥಿತಿ ಚಿಂತಾಜನಕ

Safari vs Fortuner
Published on

ಅಂಬರನಾಥ: ಮನೆಯ ಜಗಳ ಮನೆಯಲ್ಲಿದ್ದರೆ ಒಳ್ಳೆಯದು ಅದು ಬೀದಿಗೆ ಬಂದರೆ ಸಾರ್ವಜನಿಕರು ಕೂಡ ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ಮಹಾರಾಷ್ಟ್ರದ ಅಂಬರನಾಥದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.

ಕುಟುಂಬದ ಜಗಳದಿಂದ ರೊಚ್ಚಿಗೆದ್ದ ಮಗ ತಂದೆಯ ಫಾರ್ಚುನರ್​ ಕಾರಿಗೆ ತನ್ನ ಸಫಾರಿ ಕಾರಿನಿಂದ ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಪ್ಪ-ಮಗನ ಬೀದಿ ಜಗಳಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಘಟನೆಯ ವಿವರಕ್ಕೆ ಬರುವುದಾದರೆ, ತಂದೆ ಸತೀಶ್​ ಶರ್ಮ ಓರ್ವ ನಿವೃತ್ತ ಹಿರಿಯ ರಕ್ಷಣಾ ಅಧಿಕಾರಿ. ಮುಂಬೈನಲ್ಲಿ ನೆಲೆಸಿದ್ದಾರೆ. ತಮ್ಮ ಮಗ ಮತ್ತು ಸೊಸೆಯ ನಡುವಿನ ವಿವಾದವನ್ನು ಬಗೆಹರಿಸಲು ತನ್ನ ಪತ್ನಿ, ಕಿರಿಯ ಪುತ್ರನೊಂದಿಗೆ ಅಂಬರನಾಥಕ್ಕೆ ಬಂದಿದ್ದರು. ಮಗ ಬಿಂದೇಶ್ವರ ಶರ್ಮ ಮನೆಗೆ ತಲುಪಿದಾಗ ಆತ ಅಲ್ಲಿ ಇರಲಿಲ್ಲ. ಬಳಿಕ ಸೊಸೆಯನ್ನು ಸಮಾಧಾನಪಡಿಸಿ ಮುಂಬೈಗೆ ವಾಪಾಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.

ಆರೋಪಿ ಬಿಂದೇಶ್ವರ್​ ತಂದಯೊಂದಿಗೂ ಜಗಳ ಮಾಡಿಕೊಂಡಿದ್ದ. ಸತೀಶ್​ ಶರ್ಮ ವಾಪಸ್ಸಾಗುತ್ತಿದ್ದಾಗ ಅಂಬರನಾಥದಲ್ಲಿರುವ 7 ಲೆವೆಲ್ ಹೋಟೆಲ್​ ಬಳಿ ಬಿಂದೇಶ್ವರ್​ ಶರ್ಮ ತನ್ನ ಸಫಾರಿ ಕಾರಿನಲ್ಲಿ ಹಿಂದಿನಿಂದ ಅತಿ ವೇಗವಾಗಿ ಬರುತ್ತಾನೆ. ಬಹುಶಃ ಮಾತನಾಡಲು ಬರುತ್ತಿರಬಹುದೇನೋ ಎಂದು ಭಾವಿಸಿ ಕಾರನ್ನು ರಸ್ತೆ ಪಕ್ಕದಲ್ಲಿ ಪಾರ್ಕ್​ ಮಾಡಿ ತಂದೆ ಕೆಳಗೆ ಇಳಿಯುತ್ತಾರೆ. ಆದರೆ, ಬಿಂದೇಶ್ವರ್​ ತನ್ನ ಕಾರನ್ನು ನಿಲ್ಲಿಸದೇ ಓವರ್​ಟೇಕ್​ ಮಾಡಿ, ಅಡ್ಡ ಸಿಕ್ಕವರನ್ನು ಗುದ್ದಿಕೊಂಡು ಮುಂದೇ ಹೋಗಿ ಯೂಟರ್ನ್​ ಹೊಡೆದುಕೊಂಡು ಬಂದು ತಂದೆಯ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆಯುತ್ತಾನೆ. ಅಲ್ಲದೆ, ಫಾರ್ಚುನರ್​ ಕಾರನ್ನು ಸ್ವಲ್ಪ ಮೀಟರ್​ ದೂರ ಎಳೆದೊಯ್ಯುತ್ತಾನೆ. ಈ ವೇಳೆ ಫಾರ್ಚುನರ್​ ಕಾರಿನ ಹಿಂದೆ ಇದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುತ್ತದೆ.

ಬೈಕ್​ನಲ್ಲಿದ್ದ ಸವಾರ ಮತ್ತು ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಂತ್ರಸ್ತರ ಹೇಳಿಕೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು ಕಾರು ಡಿಕ್ಕಿ ಹೊಡೆದ ಸ್ಥಳದಲ್ಲಿ ಭಾರಿ ಹೈಡ್ರಾಮವೇ ನಡೆಯಿತು. ಮನೆಯಲ್ಲೇ ಕುಟುಂಬದ ಜಗಳವನ್ನು ಪರಿಹರಿಸಿಕೊಳ್ಳದೆ ಸಾರ್ವಜನಿಕ ಪ್ರದೇಶದಲ್ಲಿ ತೊಂದರೆ ಕೊಟ್ಟಿದ್ದಕ್ಕೆ ಕೆಲ ಸಾರ್ವಜನಿಕರು ಸಫಾರಿ ಕಾರನ್ನು ಜಖಂಗೊಳಿಸಿ, ಆಕ್ರೋಶ ಹೊರಹಾಕಿದರು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net