

'ಬಾಹುಬಲಿ' ಖ್ಯಾತಿಯ ಪ್ರಭಾಸ್ ತಮ್ಮ 41ನೇ ಹುಟ್ಟುಹಬ್ಬವನ್ನು ಶುಕ್ರವಾರ ಇಟಲಿಯಲ್ಲಿ ಆಚರಿಸಿಕೊಂಡಿದ್ದಾರೆ. ಅದೇನದು ಇಟಲಿಯಲ್ಲಿ? ಎಂಬ ಪ್ರಶ್ನೆ ಬರಬಹುದು. ವಿಷಯವೇನೆಂದರೆ, ಪ್ರಭಾಸ್ ಸದ್ಯ ಇಟಲಿಯಲ್ಲಿ 'ರಾಧೇ ಶ್ಯಾಮ್' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣದ ಬಿಡುವಿನಲ್ಲಿ ಚಿತ್ರತಂಡದವರು ತರಿಸಿದ್ದ ದೊಡ್ಡ ಕೇಕ್ ಕತ್ತರಿಸುವ ಮೂಲಕ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಪ್ರಭಾಸ್ ಅವರು ಕೇಕ್ ಕತ್ತರಿಸುತ್ತಿರುವ ಮತ್ತು ಚಿತ್ರತಂಡದವರ ಜತೆಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿರುವ ಹಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಸಂದರ್ಭದಲ್ಲಿ ನಿರ್ದೇಶಕ ರಾಧಾಕೃಷ್ಣ ಕುಮಾರ್, ನೃತ್ಯ ನಿರ್ದೇಶಕಿ ವೈಭವಿ ಮರ್ಚೆಂಟ್, ನಾಯಕಿ ಪೂಜಾ ಹೆಗ್ಡೆ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಈ ಮಧ್ಯೆ, ಪ್ರಭಾಸ್ ಹುಟ್ಟುಹಬ್ಬದ ಸಂದರ್ಭದಲ್ಲಿ ‘ರಾಧೇ ಶ್ಯಾಮ್’ ತಂಡದವರು ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ. ಹುಟ್ಟುಹಬ್ಬಕ್ಕೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಇದಕ್ಕೂ ಮೊದಲು ಚಿತ್ರದ ಒಂದು ಪೋಸ್ಟರ್ ಮತ್ತು ನಾಯಕಿಯನ್ನು ಪರಿಚಯಿಸುವ ಒಂದು ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಇದೀಗ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಇನ್ನು, ಇದಕ್ಕೂ ಮುನ್ನ ಪ್ರಭಾಸ್ ಹುಟ್ಟುಹಬ್ಬಕ್ಕೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಅದ್ಯಾವದರ ಗೋಜಿಗೆ ಹೋಗದ ತಂಡ ಕೇವಲ ಮೋಷನ್ ಪೋಸ್ಟರ್ ಅಷ್ಟೇ ಬಿಡುಗಡೆ ಮಾಡಿದೆ. ಈಗಾಗಲೇ ಚಿತ್ರದ ಆರ್ಧದಷ್ಟು ಚಿತ್ರೀಕರಣ ಮುಗಿದಿದ್ದು, ಮುಂದಿನ ಎರಡು ತಿಂಗಳಲ್ಲಿ ಚಿತ್ರೀಕರಣ ಸಂಪೂರ್ಣವಾಗಲಿದೆಯಂತೆ. ಆ ನಂತರ, ಮುಂದಿನ ವರ್ಷ ಚಿತ್ರ ಬಿಡುಗಡೆ ಎಂದು ಹೇಳಲಾಗುತ್ತಿದೆ.