

ಮುಂಬೈ: ಅತ್ಯಂತ ಜನಪ್ರಿಯ ವೆಬ್ಸೀರೀಸ್ ಎಂಬ ಹೆಗ್ಗಳಿಕೆಗೆ ಪಾತ್ರವಾದ 'ಮಿರ್ಜಾಪುರ್'ನ ಎರಡನೆಯ ಸೀಸನ್ ಶುಕ್ರವಾರವಷ್ಟೇ (ಅ. 23) ಬಿಡುಗಡೆಯಾಗಿದೆ. ಬಿಡುಗಡೆಯಾದ ಒಂದೇ ದಿನದಲ್ಲಿ ಈ ವೆಬ್ಸೀರೀಸ್ನ ಪೈರಸಿ ಸಹ ಆಗಿದೆ.
ಅಮೇಜಾನ್ ಪ್ರೈಮ್ನ ಅತ್ಯಂತ ಜನಪ್ರಿಯ ವೆಬ್ಸೀರೀಸ್ ಎಂದರೆ ಅದು 'ಮಿರ್ಜಾಪುರ್'. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಪಂಕಜ್ ತ್ರಿಪಾಠಿ ಅಭಿನಯದ ಈ ಸರಣಿ ಸಾಕಷ್ಟು ಜನಪ್ರಿಯವಾಗಿದ್ದಷ್ಟೇ ಅಲ್ಲ, ಇದನ್ನು ಮುಂದವರೆಸಬೇಕು ಎಂಬ ಬೇಡಿಕೆ ಪ್ರೇಕ್ಷಕರಿಂದ ಕೇಳಿ ಬಂತು.
ಜನ ಕೇಳುತ್ತಿದ್ದ ಹಿನ್ನೆಲೆಯಲ್ಲಿ, ಎರಡನೆಯ ಸೀಸನ್ನ ಚಿತ್ರೀಕರಣ ಕಳೆದ ವರ್ಷವೇ ಶುರುವಾಗಿ, ಲಾಕ್ಡೌನ್ಗೂ ಮುನ್ನವೇ ಮುಗಿದಿತ್ತು. ಲಾಕ್ಡೌನ್ ಸಂದರ್ಭದಲ್ಲಿ ಈ ಸರಣಿಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಮುಗಿಸಿದ ತಂಡ, ನಿನ್ನೆಯಷ್ಟೇ ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡಿದೆ.
ಬಿಡುಗಡೆಯಾದ ಸ್ವಲ್ಪ ಹೊತ್ತಿನಲ್ಲೇ ಟಾರೆಂಟ್, ತಮಿಳ್ರಾಕರ್ಸ್ ಮುಂತಾದ ಕಡೆ ಲಭ್ಯವಿದೆ. ಅಷ್ಟೇ ಅಲ್ಲ, ಟೆಲಿಗ್ರಾಮ್ನಲ್ಲಿ ಸಹ 'ಮಿರ್ಜಾಪುರ್'ನ ಎರಡನೆಯ ಸೀಸನ್ನ ಎರಡು ಕಂತುಗಳು ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ವಿಜಯ್ ಚಿತ್ರಕ್ಕೆ ಗುಡ್ಬೈ ಹೇಳಿದ್ರಾ ಮುರುಗದಾಸ್?
'ಮಿರ್ಜಾಪುರ್'ನ ಎರಡನೆಯ ಸೀಸನ್ನಲ್ಲಿ ಪಂಕಜ್ ತ್ರಿಪಾಠಿ ಜತೆಗೆ ಅಲಿ ಫಜಲ್, ಶ್ವೇತಾ ತ್ರಿಪಾಠಿ, ವಿಜಯ್ ವರ್ಮ, ದಿವ್ಯೆಯಂದು ಶರ್ಮ, ರಸಿಕಾ ದುಗ್ಗಲ್, ಕುಲಭೂಷಣ್ ಖರಬಂದಾ ಮುಂತಾದವರು ನಟಿಸಿದ್ದಾರೆ.