

ಬೆಂಗಳೂರು: ಇಶಾನ್ ಅಭಿನಯದ 'ರೆಮೋ' ಚಿತ್ರವು ಶುಕ್ರವಾರ (ನ.22) ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈಗಾಗಲೇ ಚಿತ್ರದ ಟ್ರೈಲರ್ ನೋಡಿದ ಸಿನಿಮಾ ಮಂದಿ, ಇಶಾನ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ, ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಭಾಗವಹಿಸಿ ಮಾತನಾಡಿದ ರವಿಚಂದ್ರನ್, ಇಶಾನ್ ಅವರನ್ನು ಹಾಡಿ ಹೊಗಳಿದ್ದಾರೆ.
ಈ ಮಧ್ಯೆ, ಕನ್ನಡದ ಇನ್ನಷ್ಟು ಜನಪ್ರಿಯ ನಿರ್ದೇಶಕರು, ಇಶಾನ್ಗೆ ಕಥೆ ಹೇಳಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. 'ಭಜರಂಗಿ' ಖ್ಯಾತಿಯ ಎ. ಹರ್ಷ', 'ರ್ಯಾಂಬೋ 2'ನ ಅನಿಲ್ ಕುಮಾರ್ ಮತ್ತು ಯುವ ರಾಜಕುಮಾರ್ ಅವರ ಮೊದಲ ಚಿತ್ರ 'ಯುವ ರಣಧೀರ ಕಂಠೀರವ' ಚಿತ್ರವನ್ನು ನಿರ್ದೇಶಿಸಬೇಕಿದ್ದ ಪುನೀತ್ ರುದ್ರನಾಗ್, ಇಶಾನ್ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರಂತೆ.
ಈ ಬಗ್ಗೆ ಈಗಾಗಲೇ ಅವರು ಇಶಾನ್ ಜೊತೆ ಒಂದು ಸುತ್ತಿನ ಮಾತುಕಥೆ ನಡೆಸಿದ್ದು, ಇಶಾನ್ ಕಾಲ್ಶೀಟ್ಗಾಗಿ ಕಾಯುತ್ತಿದ್ದಾರಂತೆ. ಮೊದಲು ಚೇತನ್ ನಿರ್ದೇಶನದ ಚಿತ್ರವನ್ನು ಮುಗಿಸಲಿರುವ ಇಶಾನ್, ನಂತರ ಮೂವರು ನಿದೇರ್ಶಕರ ಪೈಕಿ ಯಾರಿಗೆ ಮೊದಲು ಗ್ರೀನ್ ಸಿಗ್ನಲ್ ಕೊಡುತ್ತಾರೆ? ಯಾರಿಗೆ ನಂತರ ಕಾಲ್ಶೀಟ್ ಸಿಗುತ್ತದೆ? ಎಂಬ ಕುತೂಹಲ ಎಲ್ಲರಲ್ಲೂ ಇದೆ.
'ರೆಮೋ' ಚಿತ್ರವನ್ನು ಪವನ್ ಒಡೆಯರ್ ಬರೆದು ನಿರ್ದೇಶಸಿದ್ದು, ಸಿ.ಆರ್. ಮನೋಹರ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಇಶಾನ್ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಇದ್ದು, ಅಚ್ಯುತ್ ಕುಮಾರ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ವೈದಿ ಛಾಯಾಗ್ರಹಣವಿದೆ.