

ಮುಂಬೈ: ಎರಡ್ಮೂರು ದಿನಗಳ ಹಿಂದಷ್ಟೇ ತಮ್ಮ ಗಂಡ ಸ್ಯಾಮ್ ಬಾಂಬೆ ವಿರುದ್ಧ ದೈಹಿಕ ಹಲ್ಲೆ ನಡೆಸಿದ್ದಿಕ್ಕೆ ದೂರು ಕೊಟ್ಟಿದ್ದರು ಪೂನಂ ಪಾಂಡೆ. ಅಷ್ಟೇ ಅಲ್ಲ, ಅವರಿಂದ ಡೈವೋರ್ಸ್ ಪಡೆಯುವುದಕ್ಕೆ ಯೋಚಿಸಿದ್ದರು. ಆದರೆ, ಇದೀಗ ಅವರು ತಮ್ಮ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಗಂಡನ ವಿರುದ್ಧದ ದೂರು ಹಿಂಪಡೆಯುವುದಕ್ಕೆ ತೀರ್ಮಾನಿಸಿದ್ದಾರೆ.
ಎರಡು ದಿನಗಳ ಅಂತರದಲ್ಲಿ ಪೂನಂ ಪಾಂಡೆ ತಮ್ಮ ಮನಸ್ಸು ಬದಲಾಯಿಸಿದ್ದು ಏಕೆ ಮತ್ತು ಹೇಗೆ ಎಂದು ಆಶ್ಚರ್ಯವಾಗಬಹುದು. ಅದಕ್ಕೆ ಕಾರಣವೂ ಇದೆ. ಸ್ಯಾಮ್ ಬಾಂಬೆ ಕಳೆದೆರೆಡು ದಿನಗಳಿಂದ ಸಿಕ್ಕಾಪಟ್ಟೆ ಅಳುತ್ತಿದ್ದಾರಂತೆ. ಅವರ ಮೇಲಿನ ಅನುಕಂಪದಿಂದ ದೂರು ಹಿಂದೆ ಪಡೆಯಲು ಪೂನಂ ಮುಂದಾಗಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಸ್ಯಾಮ್ ಈ ವಿಷಯವಾಗಿ ತುಂಬಾ ನೊಂದಿದ್ದಾರೆ. ಸತತವಾಗಿ ಅಳುತ್ತಲೇ ಇದ್ದಾರೆ. ನನಗೆ ಏನು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ. ಪ್ರತೀ ಬಾರಿ ಅವರು ನನಗೆ ಹೊಡೆದ ಮೇಲೆ, ಸಾರಿ ಎಂದು ಅಳುತ್ತಾರೆ. ಈ ಬಾರಿ ಸಹ ಅವರು ಅದೇ ಮಾಡಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರಾಮಿಸ್ ಮಾಡಿದ್ದಾರೆ' ಎಂದು ಹೇಳಿದ್ದಾರೆ.
ಇನ್ನು ಪೊಲೀಸರಿಗೆ ತಾವು ಫೋನ್ ಮಾಡಿ ದೂರು ನೀಡಲಿಲ್ಲ ಎಂದಿರುವ ಅವರು, 'ನಮ್ಮ ರೂಮ್ನಲ್ಲಿ ಗಲಾಟೆ ಕೇಳಿಸುತ್ತಿದ್ದಂತೆಯೇ, ಹೋಟೆಲ್ನವರೇ ಪೊಲೀಸರಿಗೆ ಫೋನ್ ಮಾಡಿ ಕರೆಸಿದ್ದಾರೆ. ಪೊಲೀಸರು ಬಂದಾಗ, ನನ್ನ ಮುಖ ಊದಿತ್ತು. ನನ್ನ ದೇಹದ ಮೇಲೆಲ್ಲಾ ಗಾಯದ ಗುರುತುಗಳಿದ್ದವು. ಅವರು ತಕ್ಷಣವೇ ಆಕ್ಷನ್ ತೆಗೆದುಕೊಳ್ಳಲು ತೀರ್ಮಾನಿಸಿ ಸ್ಯಾಮ್ನ ಬಂಧಿಸಿದರು. ನನ್ನ ಜತೆಗೆ ಈ ತರಹ ನಿರಂತರವಾಗಿ ಆಗುತ್ತಲೇ ಇದ್ದುದರಿಂದ, ನಾನು ಸಹ ಬೇಸತ್ತು ಸ್ಯಾಮ್ ವಿರುದ್ಧ ಕಾನೂನೂ ರೀತಿಯ ಹೋರಾಟ ಮಾಡುವುದಕ್ಕೆ ನಿರ್ಧರಿಸಿದೆ' ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ಸೆಪ್ಟೆಂಬರ್ನ ಎರಡನೆಯ ವಾರದಲ್ಲಿ ಪೂನಂ ಮತ್ತು ಸ್ಯಾಮ್ ಮುಂಬೈನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದರು. ಅದಾದ ಕೆಲವೇ ದಿನಗಳ ಅಂತರದಲ್ಲಿ ತಮ್ಮ ಪತಿಯ ಬಗ್ಗೆ ಪೂನಂ ಪೊಲೀಸರಿಗೆ ದೂರು ನೀಡಿದ್ದರು.