ಹೆಂಡತಿ ಆಸೆಯನ್ನು ಪೂರೈಸುವುದಕ್ಕೆ ಚಿರಂಜೀವಿ ಏನ್​ ಮಾಡಿದ್ರು?

Chiranjeevi - S S Rajmouli Final
Published on

ಹೈದರಾಬಾದ್​: ಬಾಲಿವುಡ್​​ ನಟ ಚಿರಂಜೀವಿ ಸಹ ತಮ್ಮ ಪತ್ನಿ ಸುರೇಖ ಅವರ ಆಸೆಯನ್ನು ಪೂರೈಸುವ ನಿಟ್ಟಿನಲ್ಲಿ ಇತ್ತೀಚೆಗೆ ಟಾಪ್​ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ.

ಚಿರಂಜೀವಿ ಅವರ ಪತ್ನಿಯ ಆಸೆಗೂ, ರಾಜಮೌಳಿಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ವಿಷಯವೇನೆಂದರೆ, ಚಿರಂಜೀವಿ ಮತ್ತು ರಾಮ್​ಚರಣ್​ ತೇಜ ಒಟ್ಟಿಗೆ ನಟಿಸಬೇಕು ಎಂಬುದು ಚಿರಂಜೀವಿ ಅವರ ಪತ್ನಿಯ ಆಸೆಯಂತೆ. ಅದರಂತೆ ಅಪ್ಪ-ಮಗ ಇಬ್ಬರೂ 'ಆಚಾರ್ಯ' ಎಂಬ ಚಿತ್ರದಲ್ಲಿ ನಟಿಸುವ ಸುದ್ದಿಯಾಗಿತ್ತು.

ಆದರೆ, ಅವರಿಬ್ಬರು ನಟಿಸುವುದು ಸಂಶಯ ಎಂಬಂತಹ ಸುದ್ದಿಗಳು ಕೇಳಿ ಬಂದಿದ್ದವು. ಕಾರಣ, ಅಕ್ಟೋಬರ್​ನಲ್ಲಿ 'ಆಚಾರ್ಯ' ಚಿತ್ರದ ಚಿತ್ರೀಕರಣ ಮಾಡುವುದಕ್ಕೆ ಚಿರಂಜೀವಿ ಯೋಚಿಸುತ್ತಿದ್ದರು. ಅದೇ ಸಂದರ್ಭದಲ್ಲಿ ರಾಜಮೌಳಿ ಸಹ ತಮ್ಮ 'ಆರ್​ಆರ್​ಆರ್​' ಚಿತ್ರದ ಚಿತ್ರೀಕರಣ ನಡೆಸುವ ಸ್ಕೆಚ್​ ಹಾಕಿಕೊಂಡಿದ್ದರು.

ಒಂದು ಪಕ್ಷ ಅದೇ ಸಮಯದಲ್ಲಿ 'ಆರ್​ಆರ್​ಆರ್​' ಚಿತ್ರದ ಚಿತ್ರೀಕರಣ ಶುರುವಾದರೆ, ರಾಮ್​ಚರಣ್​ ತೇಜ ಇತ್ತ 'ಆಚಾರ್ಯ' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಆಗುತ್ತಿರಲಿಲ್ಲ. ಹಾಗೇನಾದರೂ ಆದರೆ, ಚಿರಂಜೀವಿ ಮತ್ತು ರಾಮ್​ಚರಣ್​ ತೇಜ ಅವರನ್ನು ಒಂದೇ ಫ್ರೇಮ್​ನಲ್ಲಿ ನೋಡುವ ಚಿರಂಜೀವಿ ಅವರ ಪತ್ನಿಯ ಆಸೆ ಈಡೇರುತ್ತಿರಲಿಲ್ಲ.

ಯಾವಾಗ ಇಂಥದ್ದೊಂದು ಸಮಸ್ಯೆ ಎದುರಾಯಿತೋ, ಚಿರಂಜೀವಿ ನೇರವಾಗಿ ರಾಜಮೌಳಿ ಅವರನ್ನು ಭೇಟಿ ಮಾಡಿದ್ದಾರೆ. ಹೇಗಾದರೂ ರಾಮ್​ಚರಣ್​ ತೇಜ ಅವರನ್ನು ಬಿಟ್ಟುಕೊಡುವುದಕ್ಕೆ ಸಾಧ್ಯವಾ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ಒಪ್ಪಿರುವ ರಾಜಮೌಳಿ, 'ಆರ್​ಆರ್​ಆರ್​' ಚಿತ್ರದ ಚಿತ್ರೀಕರಣವನ್ನು ಸ್ವಲ್ಪ ಮುಂದಕ್ಕೆ ಹಾಕಿಕೊಂಡಿದ್ದಾರಂತೆ.

ಈಗ ರಾಮ್​ಚರಣ್​ ತೇಜ ಮೊದಲು 'ಆಚಾರ್ಯ' ಚಿತ್ರದಲ್ಲಿನ ಕೆಲಸ ಮುಗಿಸಿ, ಆ ನಂತರ 'ಆರ್​ಆರ್​ಆರ್​' ಚಿತ್ರದ ಚಿತ್ರೀಕರಣಕ್ಕೆ ಹೋಗಲಿದ್ದಾರೆ. ಈ ಮೂಲಕ ಚಿರಂಜೀವಿ ತಮ್ಮ ಪತ್ನಿಯ ಆಸೆಯನ್ನು ಈಡೇರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net