

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಟಿ ಪೂಜಾ, ಕಳೆದ ಜೂನ್‌ನಲ್ಲಿ ತೆರೆಗೆ ಬಂದ ‘90 ಬಿಡಿ ಮನೀಗ್ ನಡಿ’, ‘ಅಡಚಣೆಗಾಗಿ ಕ್ಷಮಿಸಿ’, ‘ಚೆಕ್‌ಮೇಟ್’, ‘ಫೀಲ್ ಮೈ ವ್’, ‘ಮನದರಸಿ’ ಸೇರಿ ಐದಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂತಹ ಪೂಜಾ ಸದ್ಯ ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಶೀರ್ಷಿಕೆ ಇನ್ನೂ ರಿವೀಲ್ ಮಾಡಿಲ್ಲ. ಆದರೆ, ಶೂಟಿಂಗ್ ಕಂಪ್ಲೀಟ್ ಮಾಡಿ, ಸದ್ಯ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ವಿಜಯದಶಮಿ ಹಬ್ಬಕ್ಕೆ ಪೋಸ್ಟರ್, ಟೈಟಲ್ ಅಥವಾ ಟೀಸರ್ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ನೋಡಬೇಕು’ ಎಂದು ಮಾಹಿತಿ ನೀಡುತ್ತಾರೆ ಪೂಜಾ. ಅದರ ಜತೆಗೆ ‘ದಿ ಟ್ರಾವೆಲರ್’ ಎಂಬ ಮತ್ತೊಂದು ಚಿತ್ರದಲ್ಲಿ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬೋಲ್ಡ್ ಆದರೆ ಅಶ್ಲೀಲವಲ್ಲ
ಅರ್ಧ ಡಜನ್ ಚಿತ್ರಗಳಲ್ಲಿ ನಟಿಸಿರುವ ಪೂಜಾ, ‘ದಿ ಟ್ರಾವೆಲರ್’ ಚಿತ್ರದಲ್ಲಿ ಸವಾಲಿನ ಪಾತ್ರದಲ್ಲಿ ನಟಿಸಲಿದ್ದಾರಂತೆ. ‘ನಿರ್ದೇಶಕ ದೇವು ಮೊದಲು ಇದನ್ನು ವೆಬ್‌ಸರಣಿ ಮಾಡಬೇಕು ಅಂತ ಪ್ಲ್ಯಾನ್ ಮಾಡಿದ್ದರು. ಆದರೆ, ಇದೀಗ ಸಿನಿಮಾ ಮಾಡಲು ನಿರ್ಧರಿಸಲಾಗಿದೆ. ಚಿತ್ರದಲ್ಲಿ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಒಬ್ಬ ಹೆಣ್ಣು ವೇಶ್ಯೆಯಾಗಬೇಕು ಅಂದರೆ, ಅದರ ಹಿಂದೆ ಒಂದು ಕಥೆಯಿರುತ್ತದೆ. ಬೋಲ್ಡ್ ಪಾತ್ರವಾದರೂ ಅಶ್ಲೀಲತೆಯಿರುವುದಿಲ್ಲ. ಕಂಟೆಂಟ್ ಚೆನ್ನಾಗಿದೆ. ನಾವೇನು ಕೇಳುತ್ತೇವೆ ಅದು ಸತ್ಯವಲ್ಲ. ನಾವು ನೋಡಿದ್ದಷ್ಟೇ ಸತ್ಯ. ಒಂದು ದಿನದ 10 ಸೆಕೆಂಡ್‌ಗಳ ಖುಷಿಯ ಕ್ಷಣವನ್ನು ಜಾಲತಾಣದಲ್ಲಿ ಶೇರ್ ಮಾಡಿಕೊಂಡರೆ, ಆ ದಿನ ಪೂರ್ತಿ ಖುಷಿಯಾಗೇ ಇದ್ದೆ ಅಂತಲ್ಲ. ನಮ್ಮ ಸಂತೋಷ, ದುಃಖ, ನೋವುಗಳನ್ನು ಒಂದು ಕಮೆಂಟ್, ಒಂದು ಪೋಸ್ಟ್‌ನಿಂದ ನಿರ್ಧರಿಸಬಾರದು. ಹೀಗೆ ಇಂದಿನ ಪೀಳಿಗೆಗೆ ಅರ್ಥವಾಗುವಂತಹ ಗಟ್ಟಿ ವಿಷಯ’ ಎಂದು ಹೇಳಿಕೊಳ್ಳುತ್ತಾರೆ ಪೂಜಾ.
ಗಟ್ಟಿ ಪಾತ್ರಗಳನ್ನಷ್ಟೇ ಮಾಡುವೆ
ಇತ್ತೀಚೆಗೆ ಸವಾಲಿನ ಪಾತ್ರಗಳತ್ತ ಗಮನ ಹರಿಸಿರುವ ಪೂಜಾ, ‘ಕಥೆಗಳನ್ನು ಕೇಳುತ್ತಿದ್ದೇನೆ. ಆದರೆ, ಎಲ್ಲವನ್ನು ಒಪ್ಪಿಕೊಳ್ಳುತ್ತಿಲ್ಲ. ಏಕೆಂದರೆ ನಾನು ಇದುವರೆಗೆ ಅನುಭವ ಪಡೆಯಲು ನಟಿಸುತ್ತಿದ್ದೆ. ಇನ್ನುಮುಂದೆ ಗಟ್ಟಿ ಪಾತ್ರಗಳನ್ನಷ್ಟೇ ಒಪ್ಪಿಕೊಳ್ಳುತ್ತೇನೆ’ ಎನ್ನುತ್ತಾರೆ.