

ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು ಪೂಜಾ ಹೆಗ್ಡೆ. ಆ ಚಿತ್ರಗಳು ತನಗೆ ದೊಡ್ಡ ಬ್ರೇಕ್ ನೀಡಬಹುದು ಎಂದು. ಆದರೆ, ಅವರ ನಿರೀಕ್ಷೆಗಳೆಲ್ಲ ಸುಳ್ಳಾಗಿವೆ. ‘ಆಚಾರ್ಯ’ ಫ್ಲಾಪ್ ಆಗುವ ಮೂಲಕ ಅವರ ಕನಸುಗಳೆಲ್ಲ ನುಚ್ಚುನೂರಾಗಿವೆ.
2020ರಲ್ಲಿ ಬಿಡುಗಡೆಯಾದ ‘ಅಲಾ ವೈಕುಂಠಪುರಂಲೋ’ ಚಿತ್ರ ಯಶಸ್ವಿಯಾದ ನಂತರ ಪೂಜಾಗೆ ಟಾಲಿವುಡ್ನಲ್ಲಿ ಬೇಡಿಕೆ ಹೆಚ್ಚಿತ್ತು. ದೊಡ್ಡದೊಡ್ಡ ಸ್ಟಾರ್ಗಳ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಪ್ರಭಾಸ್ ಅಭಿನಯದ ‘ರಾಧೇ ಶ್ಯಾಮ್, ವಿಜಯ್ ಅಭಿನಯದ ‘ಬೀಸ್ಟ್’, ರಾಮ್ರಣ್ ತೇಜ ಮತ್ತು ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದರು. ಈ ಮೂರು ಚಿತ್ರಗಳು ತಮ್ಮನ್ನು ಇನ್ನೊಂದು ಹಂತಕ್ಕೆ ಕರೆದುಕೊಂಡು ಹೋಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಆ ನಿರೀಕ್ಷೆಗಳಲ್ಲ ಸುಳ್ಳಾಗಿವೆ.
ಈ ಪೈಕಿ, ‘ರಾಧೇ ಶ್ಯಾಮ್ ಮಾರ್ಚ್ 11ರಂದು ಜಗತ್ತಿನಾದ್ಯಂತ ಬಿಡಗುಡೆ ಆಗಿತ್ತು. ಹೇಳಿಕೇಳಿ, ಪ್ರಭಾಸ್ ಅಭಿನಯದ ಚಿತ್ರ ಬೇರೆ. ಚಿತ್ರ ದೊಡ್ಡ ಹಿಟ್ ಆಗಬಹುದು ಎಂದು ಬೆಟ್ ಕಟ್ಟಿದವರಿಗೆ, ಚಿತ್ರ ಮೊದಲ ದಿನವೇ ಫ್ಲಾಪ್ ಎಂಬ ಹಣೆಪಟ್ಟಿ ಅಂಟಿಸಿಕೊಂಡಿತು. ಏಪ್ರಿಲ್ 13ರಂದು ಬಿಡುಗಡೆಯಾದ ‘ಬೀಸ್ಟ್’ ಸಹ ಇದೇ ದಿಕ್ಕಿನತ್ತ ಸಾಗಿತು. ಆ ಎರಡು ಚಿತ್ರಗಳು ಹೋಗಲಿ, ‘ಆಚಾರ್ಯ’ ಚಿತ್ರವಾದರೂ ಗೆಲ್ಲಿಸಬಹುದು ಎಂಬ ಪೂಜಾ ನಂಬಿಕೆ ಸುಳ್ಳಾಗಿದೆ. ಈ ಚಿತ್ರಕ್ಕೂ ಪ್ರೇಕ್ಷಕರಿಂದ ವಿಭಿನ್ನವಾದ ಪ್ರತಿಕ್ರಿಯೆ ಏನೂ ಬಂದಿಲ್ಲವಾದ್ದರಿಂದ, ಇದು ಸಹ ಫ್ಲಾಪ್ ಚಿತ್ರಗಳ ಪಟ್ಟಿಗೆ ಸೇರಿದೆ. ಈ ಮೂರು ಚಿತ್ರಗಳಲ್ಲದೆ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಇನ್ನೊಂದು ಚಿತ್ರದಲ್ಲಿ ಪೂಜಾ ನಟಿಸುತ್ತಿದ್ದಾರೆ. ಈ ಚಿತ್ರವಾದರೂ ಯಶಸ್ಸು ತಂದುಕೊಡುತ್ತದಾ? ಈಗಲೇ ಹೇಳೋದು ಕಷ್ಟ.