

Pooja Hegde : ನಟಿ ಪೂಜಾ ಹೆಗ್ಡೆ ಅವರ ಸಿನಿಮಾ ವೃತ್ತಿ ಜೀವನ ಒಂದು ದಶಕವನ್ನು ದಾಟಿದೆ. ಆರಂಭದ ದಿನಗಳಲ್ಲಿ ಭರವಸೆ ಮೂಡಿಸದಿದ್ದರೂ, ನಂತರದಲ್ಲಿ ತೆಲುಗಿನಲ್ಲಿ ಸ್ಟಾರ್ ಹೀರೋಗಳ ಜತೆ ನಟಿಸಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಪೂಜಾ, ಇಂದು ಸ್ಟಾರ್ ನಾಯಕಿ ಪಟ್ಟ ಪಡೆದಿದ್ದಾರೆ. ಆದರೆ, ಇತ್ತೀಚೆಗೆ ಅವರು ನಟಿಸಿದ ತೆಲುಗು ಮತ್ತು ತಮಿಳು ಚಿತ್ರಗಳು ಸಾಲು ಸಾಲು ಸೋಲು ಕಂಡಿದ್ದು ಆಕೆಯ ಸಿನಿ ಮಾರುಕಟ್ಟೆಯು ಸಹ ಕುಸಿದಿದೆ. ಇದರಿಂದ ಪೂಜಾ ನಾಪತ್ತೆಯಾಗಿದ್ದಾರೆ ಎಂಬ ಪ್ರಚಾರವೂ ನಡೆದಿತ್ತು. ಆದರೆ, ಪೂಜಾ ಅವರ ಮಾರುಕಟ್ಟೆ ಕುಸಿದಿಲ್ಲ ಮತ್ತೆ ಏರಿದೆ ಎಂದೇ ಹೇಳಬಹುದು.
ಏಕೆಂದರೆ, ಕಾಲಿವುಡ್ನಲ್ಲಿ ಏಕಕಾಲಕ್ಕೆ ಎರಡು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಪೂಜಾಗೆ ಬಂದಿದೆ. ಅದು ಕೂಡ ಸ್ಟಾರ್ ಹೀರೋಗಳ ಎದುರು. ಒಂದು ಸಿನಿಮಾದಲ್ಲಿ ನಟ ಸೂರ್ಯಗೆ ಜೋಡಿಯಾದರೆ ಇನ್ನೊಂದು ಸಿನಿಮಾದಲ್ಲಿ ನಟ ವಿಜಯ್ಗೆ ಜೋಡಿಯಾಗಿದ್ದಾರೆ. ಸದ್ಯ ಸೂರ್ಯ ಜತೆಗಿನ ಸಿನಿಮಾ ಮುಗಿಸಿರುವ ಪೂಜಾ, ಸದ್ಯದಲ್ಲೇ ವಿಜಯ್ಗೆ ಮತ್ತೊಮ್ಮೆ ಜೋಡಿಯಾಗಲಿದ್ದಾರೆ. ಈ ಹಿಂದೆ ಇಬ್ಬರು ಬೀಸ್ಟ್ ಸಿನಿಮಾದಲ್ಲಿ ನಟಿಸಿದ್ದರು. ತೆಲುಗಿನಲ್ಲೂ ಒಳ್ಳೆ ಅವಕಾಶ ಸಿಕ್ಕಿದೆ ಎಂದು ವರದಿಯಾಗಿದೆ. ಹೀಗಿರುವಾಗ ಪೂಜಾ ಹೆಗ್ಡೆಗೆ ಸಂಬಂಧಿಸಿದ ಇಂಟರೆಸ್ಟಿಂಗ್ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕ್ರೇಜಿ ಬ್ಯೂಟಿ ಇತ್ತೀಚೆಗೆ ಶ್ರೀಲಂಕಾದಲ್ಲಿ ತನ್ನ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವೈಲ್ಡ್ ಕೋಸ್ಟ್ ಟೆಂಟೆಡ್ ಲಾಡ್ಜ್ ಎಂದು ಕರೆಯಲ್ಪಡುವ ಲಂಕಾದ ತಮ್ಮ ನೆಚ್ಚಿನ ರೆಸಾರ್ಟ್‌ನಲ್ಲಿ ಒಂದು ರಾತ್ರಿ ತಂಗಿದ್ದು, ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಈ ರೆಸಾರ್ಟ್‌ನ ವಿಶೇಷವೆಂದರೆ ಇದು ಸಂಪೂರ್ಣವಾಗಿ ಬಿದಿರಿನಿಂದ ಮಾಡಲ್ಪಟ್ಟಿದೆ ಮತ್ತು ಶಾಂತ ಮತ್ತು ಆಹ್ಲಾದಕರ ಜಲಾನಯನ ಪ್ರದೇಶದಲ್ಲಿ ಸ್ಪಾ ಸೌಲಭ್ಯಗಳೊಂದಿಗೆ ವೈದ್ಯಕೀಯ ಚಿಕಿತ್ಸೆಯಂತಹ ಅನೇಕ ವಿಶೇಷ ಸೌಲಭ್ಯಗಳನ್ನು ಹೊಂದಿದೆ. ಆದರೆ, ಇದು ತುಂಬಾ ದುಬಾರಿ ಸ್ಥಳವಾಗಿದೆ. ಒಂದು ರಾತ್ರಿ ಅಲ್ಲಿ ತಂಗಿದರೆ 1 ಲಕ್ಷದಿಂದ 1.5 ಲಕ್ಷ ರೂ. ಶುಲ್ಕ ಪಾವತಿಸಬೇಕು.
ನಟಿ ಪೂಜಾ ಹೆಗ್ಡೆ ಒಂದು ರಾತ್ರಿ ಅಲ್ಲಿ ತಂಗಿದ್ದಕ್ಕಾಗಿ ಸುಮಾರು ಒಂದು ಲಕ್ಷದ ಐವತ್ತು ಸಾವಿರ ಕೊಟ್ಟು ಅಲ್ಲಿನ ಪ್ರಕೃತಿ ಸೌಂದರ್ಯ ಹಾಗೂ ಶಾಂತಿಯುತ ವಾತಾವರಣವನ್ನು ಸವಿದಿದ್ದಾರೆ. ರೆಸಾರ್ಟ್‌ನಲ್ಲಿ ಸುತ್ತಾಡುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪೂಜಾ ಹೆಗ್ಡೆಯಂತಹ ಸ್ಟಾರ್ ಹೀರೋಯಿನ್ ಬಗ್ಗೆ ಯೋಚಿಸಿದರೆ ಅಷ್ಟೊಂದು ಹಣ ದುಬಾರಿಯಲ್ಲ ಎನ್ನುತ್ತಾರೆ ನೆಟ್ಟಿಗರು. (ಏಜೆನ್ಸೀಸ್)