ಗ್ಯಾಂಗ್​ ಲೀಡರ್​ ಆದ ವಿನಯ್​ ರಾಜಕುಮಾರ್​; 'ಪೆಪೆ' ಮುಕ್ತಾಯ

Pepe
Published on

ಬೆಂಗಳೂರು: ವಿನಯ್​ ರಾಜಕುಮಾರ್​ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ನಾಲ್ಕು ವರ್ಷಗಳೇ ಆಗಿವೆ. 2018ರಲ್ಲಿ ಬಿಡುಗಡೆಯಾದ 'ಅನಂತು v/s ನುಸ್ರುತ್' ಚಿತ್ರವೇ ಕೊನೆ. ಆ ನಂತರ ವಿನಯ್​, 'ಗ್ರಾಮಾಯಣ', 'ಅದೊಂದಿತ್ತು ಕಾಲ' ಮತ್ತು 'ಪೆಪೆ' ಎಂಬ ಚಿತ್ರಗಳಲ್ಲಿ ನಟಿಸಿದ್ದಾರಾದರೂ, ಆ ಯಾವುದೇ ಚಿತ್ರಗಳು ಬಿಡುಗಡೆಯಾಗಿಲ್ಲ.

ಇದೀಗ ‘ಪೆಪೆ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಶ್ರೀಲೇಶ್ ಎಸ್ ನಾಯರ್ ನಿರ್ದೇಶನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಕ್ಲೈಮ್ಯಾಕ್ಸ್​ ಚಿತ್ರೀಕರಣ ಇತ್ತೀಚೆಗೆ ಸಕಲೇಶಪುರದಲ್ಲಿ ಮುಕ್ತಾಯವಾಗಿದ್ದು, ಸಾಹಸ ನಿರ್ದೇಶಕ ರವಿವರ್ಮಾ ಸಂಯೋಜಿಸಿರುವ ಕ್ಲೈಮ್ಯಾಕ್ಸ್​ ಫೈಟ್​ ಮೂಲಕ ಚಿತ್ರೀಕರಣ ಮುಕ್ತಾಯವಾಗಿದೆ.

ಇದೊಂದು ಆಕ್ಷನ್​ ಥ್ರಿಲ್ಲರ್​ ಚಿತ್ರವಾಗಿದ್ದು, ಈ ಚಿತ್ರದಲ್ಲಿ ವಿನಯ್​ ಮೊದಲ ಬಾರಿಗೆ ಗ್ಯಾಂಗ್​ಲೀಡರ್​ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಹೊಡೆದಾಟ, ರಕ್ತಪಾತವಿದ್ದು, ಟೀಸರ್​ ಮತ್ತು ಪೋಸ್ಟರ್​ಗಳಲ್ಲಿ ವಿನಯ್​ ಕಂಡು ದೊಡ್ಮನೆ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ.

‘ಪೆಪೆ’ ಚಿತ್ರದಲ್ಲಿ ಮೆದಿನಿ ಕೆಳಮನಿ, ಯಶ್ ಶೆಟ್ಟಿ, ಕಾಜಲ್ ಕುಂದರ್, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್, ಬಾಲಾ ರಾಜ್ವಾಡಿ ಮುಂತಾದವರು ನಟಿಸಿದ್ದು, ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಮತ್ತು ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ.

ಕೊಡಗು, ಸಕಲೇಶಪುರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿರುವ 'ಪೆಪೆ' ಚಿತ್ರವನ್ನು ಉದಯ್ ಮತ್ತು ಶ್ರೀರಾಮ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net