

ಕಣ್ಣಪ್ಪ ಶಿವನ ಪರಮಭಕ್ತ. ಕಣ್ಣಪ್ಪನ ಭಕ್ತಿಯ ಕಥೆಯನ್ನು ಹಿಂದಿನ ತಲೆಮಾರಿನವರು ಹೇಳುತ್ತಲೇ ಬಂದಿದ್ದಾರೆ. ಈ ಹಿಂದೆ ರಾಜಕುಮಾರ್ ಅಭಿನಯದ "ಬೇಡರ ಕಣ್ಣಪ್ಪ' ಸಿನಿಮಾ ಮೂಲಕವೂ ಕಣ್ಣಪ್ಪನ ಕಥೆಯನ್ನು ಹೇಳಲಾಗಿದೆ. ಈಗ ಮತ್ತೊಮ್ಮೆ ಅದೇ ಕಣ್ಣಪ್ಪನ ಕಥೆಯನ್ನು ಹೇಳಲು ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಸಿದ್ಧವಾಗಿದ್ದಾರೆ. ಈ ಹಿಂದೆ ಮಹಾಭಾರತ ಸರಣಿಯನ್ನು ನಿರ್ದೇಶಿಸಿದ್ದ ಖ್ಯಾತಿ ಇವರದ್ದು.
ಇದನ್ನೂ ಓದಿ : ನಾಳೆಯಿಂದಲೇ ಈ ಒಟಿಟಿಯಲ್ಲಿ ಪ್ರಸಾರವಾಗಲಿದೆ ಆಚಾರ್ & ಕೋ.
ಚಿತ್ರಕ್ಕೆ "ಕಣ್ಣಪ್ಪ' ಎಂಬ ಶೀರ್ಷಿಕೆ ಜತೆಗೆ "ಎ ಟ್ರೂ ಎಪಿಕ್ ಇಂಡಿಯನ್ ಟೇಲ್' ಎಂಬ ಅಡಿಬರಹವಿದೆ. ನಾಸ್ತಿಕನಾದ ಕಣ್ಣಪ್ಪನ ವಿಸ್ಮಯಕಾರಿ ರೂಪಾಂತರವು ಈ ಚಿತ್ರದ ಕಥಾವಸ್ತು. ತೆಲುಗು ನಟ ವಿಷ್ಣು ಮಂಚು ಇದೇ ಮೊದಲ ಬಾರಿಗೆ ಪೌರಾಣಿಕ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಈ ಬಗ್ಗೆ ವಿಷ್ಣು, "ಈಶ್ವರನ ಅಪ್ರತಿಮ ಭಕ್ತನಾಗಿ ಮತ್ತು ಇತಿಹಾಸದ ಅತ್ಯಂತ ಅಸಾಧಾರಣ ಭಕ್ತರಲ್ಲಿ ಒಬ್ಬನಾದ ಕಣ್ಣಪ್ಪನ ಪಾತ್ರ ಮಾಡುವ ಅವಕಾಶ ಸಿಕ್ಕಿರುವುದು ತಮ್ಮ ಭಾಗ್ಯ' ಎಂದು ಹೇಳಿಕೊಂಡಿದ್ದಾರೆ.
ಇವರಿಗೆ ಜೋಡಿಯಾಗಿ ಬಾಲಿವುಡ್ ನಟಿ ನೂಪುರ್ ಸನನ್ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಚಿತ್ರಕ್ಕೆ ಕಾಳಹಸ್ತಿಯಲ್ಲಿ ಚಾಲನೆ ಸಿಕ್ಕಿದೆ. ಭಕ್ತಿ ಪ್ರಧಾನವಾಗಿರುವ ಈ ಚಿತ್ರ, ಪ್ಯಾನ್ ಇಂಡಿಯಾ ಬಹುಭಾಷೆಗಳಲ್ಲಿ ಮೂಡಿಬರಲಿದೆ.
-ಏಜೆನ್ಸೀಸ್